ಸದಾಶಿವ - ಸಂಚಿಕೆ - 66
ಸದಾಶಿವ
ಸಂಚಿಕೆ - 66
ರಮೇಶನೊಂದಿಗೆ ಕುಶಲೋಪಚಾರವನ್ನು ಮಾತನಾಡಿ ಸದಾಶಿವ ತನ್ನ ಮನೆಯತ್ತ ಹೊರಟ. ಮನೆಯೊಳಗೆ ಬಂದ ಸದಾಶಿವನಿಗೆ ಸರಸಿ ಕುಡಿಯಲು ನೀರು ಕೊಟ್ಟಳು.ಚಾವಡಿಯಲ್ಲಿ ಕುಳಿತು ಆಟವಾಡುತ್ತಿದ್ದ ಭಕ್ತಿಯನ್ನು ಹೂವಿನಂತೆ ಎತ್ತಿ ,ಮೃದುವಾಗಿ ಅವಳ ಕೆನ್ನೆಗೆ ಸಿಹಿ ಮತ್ತೊಂದನ್ನು ಕೊಟ್ಟ. ತಾಯಿ ಊಟ ತಯಾರಾಗಿದೆ ,ಬಂದು ಊಟ ಮಾಡು ಎಂದು ಎಚ್ಚರಿಸಿದಾಗ ಒಳ ಹೋಗಿ ಊಟಕ್ಕೆ ಕುಳಿತ. ಸರಸಿ ಮನೆಯಲ್ಲಿ ಎಷ್ಟೇ ಜನರಿದ್ದರೂ ಸದಾಶಿವನಿಗೆ ಮಾತ್ರ ತಾನೇ ಬಡಿಸುತ್ತಿದ್ದಳು. ಹರಿವೆ ಸೊಪ್ಪಿನ ಪಲ್ಯ,ಉಪ್ಪಿನಕಾಯಿ, ಮಲ್ಲಿಗೆಯಂತಹ ಬಿಳಿ ಅನ್ನಕ್ಕೆ ,ಎಲ್ಲ ತರಕಾರಿ ಹಾಕಿ ಮಾಡಿದ ಸಾಂಬಾರಿನ ರುಚಿಯೊಂದಿಗೆ ,ಕರಿದ ಸಂಡಿಗೆ ಜತೆ ,ಕೊನೆಗೆ ಕುಡಿಯಲು ಮಜ್ಜಿಗೆ ಇತ್ತು. ತೃಪ್ತಿಯಿಂದ ಊಟ ಮಾಡಿ ಎದ್ದ ಸದಾಶಿವನನ್ನು ಕಂಡಾಗ ಸರಸಿಗೆ ಖುಷಿಯಾಯ್ತು. ಯಾವ ತಾಯಿಗೆ ಆಗಲಿ ಕೆಲಸ ಮಾಡಿ ಬಂದ ಮಗ ಹೊಟ್ಟೆ ತುಂಬಾ ಊಟ ಮಾಡಿದರೆ ಖುಷಿಯೇ ಅಲ್ಲವೇ; ಹೊಟ್ಟೆ ತುಂಬ ಊಟ ಮಾಡಿದ ನಂತರ ಸದಾಶಿವನಿಗೆ ತೂಕಡಿಕೆ ಬರತೊಡಗಿತು. ನೆಮ್ಮದಿಯಿಂದ ಹೋಗಿ ಮಲಗಿದವನಿಗೆ ನಿದ್ರಾದೇವಿ ಬಂದುಬಿಟ್ಟಳು. ಚಿಂತೆಯಿಲ್ಲದೆ ಇದ್ದಾಗ, ಮೈಮುರಿದು ಕೆಲಸ ಮಾಡಿ ಬಂದಾಗ, ನೆಮ್ಮದಿಯ ನಿದ್ರೆ ತಾನಾಗಿಯೇ ಬರುತ್ತದೆ.ಹಾಗೇ ಸದಾಶಿವನ ಆರಾಮವಾಗಿ ನಿದ್ರಿಸಿದ. ಮುಂಜಾನೆಯ ಕೋಗಿಲೆಯ ಕುಹೂಕುಹೂ ಧ್ವನಿಯೊಂದಿಗೆ, ಮಂಗಳಕರವಾದ ಸುಪ್ರಭಾತವು ರೇಡಿಯೋದಿಂದ ಕೇಳಿ ಬರುತ್ತಿತ್ತು .ರಾಯರು ದೇವರಿಗೆ ದೀಪವನ್ನಿಟ್ಟು, ಊದುಬತ್ತಿಯನ್ನು ಹಚ್ಚಿದಾಗ, ಅದರ ಸುಗಂಧವು ಮನೆಯನ್ನಾವರಿಸಿ ಭಕ್ತಿಯನ್ನು ಹೆಚ್ಚಿಸಿತು. ಬೆಳಗ್ಗೆದ್ದ ಸದಾಶಿವ ತನ್ನೂರಿನ ಶ್ರೀರಾಮ ವ್ಯಾಯಾಮ ಶಾಲೆಗೆ ಹೊರಟ ,ಸದಾಶಿವನ ಸದೃಢ ಮೈ ಕಟ್ಟಾದರೂ, ಸುಮ್ಮನೆ ತಿಂದುಂಡು ಸೋಮಾರಿಯಾಗಿರಲಿಲ್ಲವ್ಯಾಯಾಮ ಶಾಲೆಗೆ ಪ್ರತಿನಿತ್ಯವೂ ಬೆಳಗ್ಗೆದ್ದು ನಡೆದುಕೊಂಡೇ ಹೋಗುತ್ತಿದ್ದ. ದೇಹ ಹುರಿ ಮಾಡುತ್ತಿದ್ದ. ಸದಾಶಿವನ ಗೆಳೆಯರು ಅಲ್ಲಿಗೆ ಬರುತ್ತಿದ್ದರು. ಅವರಿಗೆಲ್ಲರಿಗೂ ಸದಾಶಿವನೇ ಹೀರೋ! ಅವನ ಬಾಲದಂತೆ ಅವರೆಲ್ಲರೂ ಅವನ ಹಿಂದೆಯೇ ಇರುತ್ತಿದ್ದರು. ಸಣ್ಣಪುಟ್ಟ ಜಗಳವಾದಾಗ ಅವನ ಸ್ನೇಹಿತರು ಸದಾಶಿವನಲ್ಲಿ ಹೇಳುತ್ತೇನೆ ಎಂದು ಹೆದರಿಸುತ್ತಿದ್ದರು. ಸದಾಶಿವನ ಹೆಸರು ಕೇಳಿದ ಕೂಡಲೇ ಉಳಿದವರು ಸುಮ್ಮನೆ ಹೊರಟು ಹೋಗುತ್ತಿದ್ದರು. ಸದಾಶಿವ ಯಾರಿಗೂ ಹಾನಿಯುಂಟು ಮಾಡುತ್ತಿರಲಿಲ್ಲ .ಆದರೆ ಅನ್ಯಾಯವನ್ನು ಕಂಡರೆ ಅವನು ಸಿಡಿದೇಳುತ್ತಿದ್ದ.ಹೀಗೆ ಒಮ್ಮೆ ವ್ಯಾಯಾಮ ಶಾಲೆಯಲ್ಲಿ ಒಬ್ಬ ದೇವಸ್ಥಾನದ ಜೀರ್ಣೋದ್ಧಾರ ಎಂದು ಹೇಳಿಕೊಂಡು ಸದಾಶಿವ ಊರವರ ಹಣವನ್ನು ಕಬಳಿಸುತ್ತಿದ್ದಾನೆ,ಎಂದು ವ್ಯಂಗ್ಯವಾಗಿ ಮಾತನಾಡಿದ. ಸದಾಶಿವನಿಗೆ ಈ ವಿಚಾರ ತನ್ನ ಸ್ನೇಹಿತರಿಂದ ತಿಳಿಯಿತು ,ಹಾಗೆ ಅಂದವನನ್ನು ಕರೆದುಕೊಂಡು ಬರುವಂತೆ ಸ್ನೇಹಿತರಲ್ಲಿ ಹೇಳಿದ.ಹಾಗೆ ಬಂದವನನ್ನು ಕರೆದುಕೊಂಡು ಸೀದಾ ದೇವಸ್ಥಾನಕ್ಕೆ ಕರೆದುಕೊಂಡು ಹೋದ. ಸದಾಶಿವನ ಜೊತೆ ಹೊರಟ ಅವನಿಗೆ ಎದೆ ಡವಡವ ಎನ್ನ ತೊಡಗಿತು. ಇನ್ನೇನು ಗ್ರಹಚಾರ ಕಾದಿದೆಯೋ, ನನಗೆ ಏಕೆ ಬೇಕಿತ್ತು ಈ ಉಸಾಬರಿ ಎಂದುಕೊಂಡ. ದೇವಸ್ಥಾನದ ಮುಂದುಗಡೆ ಊರ ಜನರೆಲ್ಲ ಕಾಯುತ್ತಾ ನಿಂತಿದ್ದರು..
ಮುಂದುವರಿಯುವುದು
✍🏻 *ನಾಗಶ್ರೀ ಎಸ್ ಭಂಡಾರಿ ಮೂಡಬಿದಿರೆ

Comments
Post a Comment