ಸದಾಶಿವ - ಸಂಚಿಕೆ - 63

*ಸದಾಶಿವ*
*ಸಂಚಿಕೆ - 63*

ಸುಬ್ರಹ್ಮಣ್ಯ ಸ್ವಾಮಿ ಸದಾಶಿವನನ್ನು ಹುಡುಕಿಕೊಂಡು ಸಾಲೆತ್ತೂರಿಗೆ  ಬಂದರು. ಒಬ್ಬನಲ್ಲಿ ಸದಾಶಿವನ ಮನೆಯೆಲ್ಲಿ? ಅವರ ತಂದೆಯ ಹೆಸರ ರಾಮರಾಯರು,  ಎಂದಾಗ ಊರಿನಲ್ಲಿ ಗಣ್ಯ ವ್ಯಕ್ತಿಯಾದ ರಾಮರಾಯರ ಮನೆಗೆ ಆತ ಸುಬ್ರಹ್ಮಣ್ಯ ಸ್ವಾಮಿಯನ್ನು ಕರೆದುಕೊಂಡು ಹೋದ. ಯಾವುದೇ ಕೆಲಸ ಕಾರ್ಯಗಳಿಲ್ಲದ ಕಾರಣ ಸದಾಶಿವ ಅಂದು ಮನೆಯಲ್ಲಿಯೇ ಇದ್ದ. ಭಕ್ತಿಯನ್ನು ತನ್ನ  ತೊಡೆಯ ಮೇಲೆ ಕೂರಿಸಿಕೊಂಡು ಆಟವಾಡಿಸುತ್ತಿದ್ದ. ಹೊರಗೆ ಜಗಲಿಯಲ್ಲಿ ಕುಳಿತು ಸರಸಿ ಕೊಟ್ಟ ಅಡಿಕೆ ಮತ್ತು ವೀಳ್ಯದೆಲೆಯನ್ನು ಮೆಲ್ಲುತ್ತಿದ್ದ ರಾಮರಾಯರು ಮನೆಯ ಮುಂದಣ ಗೇಟನ್ನು ತೆರೆದು ಒಳಗೆ ಬರುತ್ತಿದ್ದ  ಸುಬ್ರಹ್ಮಣ್ಯಸ್ವಾಮಿಯನ್ನು ಅಪಾದಮಸ್ತಕವಾಗಿ ನೋಡತೊಡಗಿದರು. ಈತನು ಎಲ್ಲಿಂದ ಬಂದಿದ್ದಾನೆ? ನೋಡಿದರೆ ಶ್ರೀಮಂತ ಮನೆತವನದಂತೆ ಕಾಣುತ್ತಿದ್ದಾನೆ! ನಾನು ಯಾವತ್ತೂ ನಮ್ಮೂರಿನಲ್ಲಿ ಇವನನ್ನು ನೋಡಿದ ನೆನಪಿಲ್ಲ; ಊರಿಗೆ
ಹೊಸಬನಿರಬೇಕೆಂದು ಯೋಚಿಸಿ ಅವನನ್ನು ಎದುರುಗೊಳ್ಳಲು ಮುಂದೆ ಬಂದರು. ರಾಮರಾಯರ ಸಾತ್ವಿಕ ಮುಖ, ಸದಾಶಿವನ  ಮುಖ ಚಹರೆಯ ಹೋಲಿಕೆಗಳು ಕಂಡು ಬಂದದ್ದರಿಂದ ಇವರೇ ಸದಾಶಿವನ
ತಂದೆಯಾಗಿರಬಹುದು ಎಂದು ಭಾವಿಸಿ, ನಮಸ್ಕಾರ ನಾನು ಮಡಿಕೇರಿಯಿಂದ ಬಂದಿದ್ದೇನೆ, ನನ್ನ ಹೆಸರು ಸುಬ್ರಹ್ಮಣ್ಯ ಸ್ವಾಮಿ, ನಿಮ್ಮ ಮಗ ಸದಾಶಿವ ಮಡಿಕೇರಿಯಲ್ಲಿ ನನ್ನ ಎಸ್ಟೇಟಿನಲ್ಲಿ ಮ್ಯಾನೇಜರ್ ಆಗಿ ಕೆಲಸಕ್ಕಿದ್ದ ,ಎಂದು ತಮ್ಮ ಸಂಕ್ಷಿಪ್ತ ಪರಿಚಯ ಹೇಳಿಕೊಂಡಾಗ; ರಾಮರಾಯರು ಬಂದಂತಹ ಆಗಂತುಕ ವ್ಯಕ್ತಿಗೆ ಪ್ರತಿ ನಮಸ್ಕಾರವನ್ನು ತಿಳಿಸಿ, ಓಹೋ !ಅದು ನೀವೇನಾ! ಸದಾಶಿವ ಯಾವಾಗಲೂ ನಿಮ್ಮ ಬಗ್ಗೆ ಹೇಳುತ್ತಿದ್ದ ;ನನ್ನ ಮಗನನ್ನು ಜೋಪಾನವಾಗಿ ನೋಡಿಕೊಂಡು ನನ್ನ ಮಗ ಮರಳಿ  ನಮಗೆ ದೊರೆಯುವಂತೆ ಮಾಡಿದ ಪುಣ್ಯಾತ್ಮರು ನೀವು ,ನಿಮಗೆಷ್ಟು ಧನ್ಯವಾದ ತಿಳಿಸಿದರೂ ಸಾಲದು ,ನಮ್ಮ ಪಾಲಿಗೆ ನೀವೇ ದೇವರು ಎಂದಾಗ, ದೊಡ್ಡ ಮಾತು ಎಂದು ನಕ್ಕು ಸುಮ್ಮನಾದರು.ಆಗ ರಾಮರಾಯರು ಛೇ! ಮಾತಿನ ಭರಾಟೆಯಲ್ಲಿ ನಿಮ್ಮನ್ನು ಒಳಗೆ ಕರೆಯುವುದನ್ನೇ ಮರೆತುಬಿಟ್ಟೆ, ಬನ್ನಿ ಒಳಗೆ ಕುಳಿತುಕೊಂಡು ಮಾತನಾಡೋಣ ,ಎಂದು ಒಳಗೆ ಆಹ್ವಾನಿಸಿದರು. ತಂದೆ ಯಾರ ಬಳಿ ಅಷ್ಟೊಂದು ಆತ್ಮೀಯತೆಯಿಂದ ಜೋರುಧ್ವನಿಯಲ್ಲಿ ಮಾತನಾಡುತ್ತಿದ್ದಾರೆ ಎಂದು ನೋಡಲು ಹೊರಬಂದ ಸದಾಶಿವನಿಗೆ ಸುಬ್ರಹ್ಮಣ್ಯ ಸ್ವಾಮಿಯನ್ನು ಕಂಡು ಮಾತೇ ಹೊರಡಲಿಲ್ಲ, ಲಗುಬಗೆಯಿಂದ ಸುಬ್ರಹ್ಮಣ್ಯ ಸ್ವಾಮಿಯ ಹತ್ತಿರ ಬಂದು ಅವರ ಪಾದ ಮುಟ್ಟಿ ನಮಸ್ಕರಿಸಿದ. ಅವನ ಸನ್ನಡತೆಗೆ ಸುಬ್ರಮಣ್ಯ ಸ್ವಾಮಿಗೆ ಮಾತೇ ಹೊರಡದಾಯಿತು. ಮನದ ಮೂಲೆಯಲ್ಲಿ ಇಂತಹ ಒಳ್ಳೆಯ ಹುಡುಗ ನನ್ನಳಿಯ ಆಗಲಿಲ್ಲವಲ್ಲ ಎಂದು ಬೇಸರವೂ ಆಯಿತು. ದೈವ ಚಿತ್ತ ಏನಿರುತ್ತದೋ ಅದೇ ನಡೆಯುತ್ತದೆ ಎಂದು ನಿಟ್ಟುಸಿರು ಬಿಟ್ಟರು.ಸದಾಶಿವ ಆತುರದಿಂದ ಗಂಗಾಳನ್ನೇಕೆ ಕರೆದುಕೊಂಡು ಬರಲಿಲ್ಲ, ಗಂಗಾ ಆರೋಗ್ಯವಾಗಿದ್ದಾಳೆ ತಾನೇ  ಎಂದು ಪ್ರಶ್ನಿಸಿದಾಗ; ಗಂಗಾ ಕ್ಷೇಮವಾಗಿದ್ದಾಳೆ,ನಿನ್ನನ್ನು ತುಂಬಾ ಕೇಳಿದೆನೆಂದು ಹೇಳಲು ಹೇಳಿ ಕಳಿಸಿದ್ದಾಳೆ ,ನಿನಗಾಗಿ ನಿನ್ನ ಪ್ರಿಯವಾದ ತಿಂಡಿಯನ್ನು ಮಾಡಿ ಕೊಟ್ಟು ಕಳುಹಿಸಿದ್ದಾಳೆ ಎಂದು ತಿಂಡಿಯ ಬುತ್ತಿಯನ್ನು  ಕೊಟ್ಟರು.

 ಮುಂದುವರಿಯುವುದು

 ✍🏻 *ನಾಗಶ್ರೀ.ಎಸ್. ಭಂಡಾರಿ*
*ಮೂಡಬಿದಿರೆ*

Comments

Popular posts from this blog

ಹೆಮ್ಮೆಯ ಭಂಡಾರಿ ಪ್ರತಿಭೆ : 4 - ಸಂದೀಪ್ ಭಂಡಾರಿ

ಸದಾಶಿವ. ಸಂಚಿಕೆ - 2

ಸದಾಶಿವ - ಸಂಚಿಕೆ-32