ಸದಾಶಿವ - ಸಂಚಿಕೆ - 61

*ಸದಾಶಿವ*
*ಸಂಚಿಕೆ - 61*

     ಹಾವೊಂದು
ಹೆಡೆಯಾಡಿಸುತ್ತಾ ನೋಡುತ್ತಿತ್ತು. ಭಕ್ತಿಯಿಂದ ಅದಕ್ಕೆ ಕೈಮುಗಿದ ಸದಾಶಿವ; ನಿನ್ನ ದೇವಸ್ಥಾನದ ಜೀರ್ಣೋದ್ಧಾರವನ್ನು ನಾನು ಮಾಡಿಯೇ ತೀರುತ್ತೇನೆ ,ಎಂದು ಪ್ರಾರ್ಥಿಸಿದಾಗ ;ಹಾವು ಸುಮ್ಮನೆ ಇಳಿದು ಹೋಯಿತು. ಹಿಂತಿರುಗಿ ಹಾವಿನತ್ತ ನೋಡಿದಾಗ ಹಾವಿನ ಸುಳಿವು ಇರಲೇ ಇಲ್ಲ.ದೇವರು ಎಲ್ಲಿದ್ದಾನೆ ಎಂದು ಕೇಳುವವರು ಒಂದನ್ನು ಅರಿತುಕೊಳ್ಳಬೇಕು ಪವಾಡ ತೋರಿಸಿದಾಕ್ಷಣ ಮನುಷ್ಯ ದೇವರಾಗುವುದಿಲ್ಲ, ನಿಜ ಬಕುತನಿಗೆ ದೇವರು ಒಲಿಯದೆ ಇರುವುದಿಲ್ಲ; ಒಂದು ತುತ್ತು ಅನ್ನವೂ ಸಿಗದವರಿಗೆ ಮೃಷ್ಟಾನ್ನ ದೊರಕಿತೆಂದರೆ ಅದು ಅಂದು ಅವನು ಮಾಡಿದ ಪ್ರಾರ್ಥನೆಯ ತೀವ್ರತೆ ಮತ್ತು ಶಕ್ತಿಯ ಮೇಲೆ ಅವಲಂಬಿತವಾಗಿರುತ್ತದೆ. ಮಕ್ಕಳ ಮುಗ್ಧ ಭಕ್ತಿಗೆ ದೇವರು ಒಲಿಯದೆ ಇರುವುದಿಲ್ಲ, ಭಕ್ತಿಯ ನಿಜ ಭಕ್ತಿ ದೇವರಿಗೂ ಪ್ರಿಯವಾಗಿತ್ತು.ಹಾಗಾಗಿ ಅವಳ ಬೆಂಬಲವಾಗಿ ಪರಮೇಶ್ವರನೇ ನಿಂತಿದ್ದ.ನಂತರ ಸದಾಶಿವ ಶಿವಲಿಂಗದ ಮೇಲೆ ನೀರು ಸುರಿದು ಶಿವಲಿಂಗವನ್ನು ಸ್ವಚ್ಛಗೊಳಿಸಿ ತಾವು ತಂದಿದ್ದ ಸಂಪಿಗೆಯ ಹೂವುಗಳನ್ನು ಲಿಂಗದ ಮೇಲಿಟ್ಟು ಪ್ರಾರ್ಥಿಸಿದ. ಮಗು ಕೂಡ ಎರಡೂ ಕೈಯನ್ನು ಮುಗಿದು ತದೇಕ ಚಿತ್ತದಿಂದ ಶಿವಲಿಂಗವನ್ನು ನೋಡುತ್ತಿತ್ತು. ಭಕ್ತಿಯಿಂದ ಶಿವನನ್ನು ಪೂಜಿಸಿ ಹೊರಬಂದರೆ ಮಗುವನ್ನು ಎತ್ತಿಕೊಂಡು ಮನೆಗೆ ಬಂದ ಸದಾಶಿವ ಕೂಡಲೇ ಕಾರ್ಯ ಪ್ರವೃತ್ತನಾದ. ಊರಿನ ಪ್ರಮುಖ ವ್ಯಕ್ತಿಯಾದ ಶ್ರೀಪತಿ ರಾಯರ ಮನೆಗೆ ಹೋಗಿ ದೇವಸ್ಥಾನದ ಜೀರ್ಣೋದ್ಧಾರದ ವಿಚಾರವಾಗಿ ಚರ್ಚಿಸಿದ. ಮರುದಿನವೇ ರಾಮರಾಯರು ಮತ್ತು  ಶ್ರೀಪತಿ ರಾಯರ ಸಮ್ಮುಖದಲ್ಲಿ ಊರವರನ್ನೆಲ್ಲ ಸೇರಿಸಿ ದೇವಸ್ಥಾನದ ಜೀರ್ಣೋದ್ಧಾರದ ಕುರಿತು ಮಾತುಕತೆ ನಡೆಸಿದರು. ಊರವರು ತಮ್ಮ ಊರಿನ ಪ್ರಮುಖ ದೇವಸ್ಥಾನದವಾದ ಶಿವನ ದೇವಾಲಯದ ಕಾರ್ಯ ಬೇಗನೆ ನಡೆಸಬೇಕೆಂದು ಸಂಕಲ್ಪ ಮಾಡಿಕೊಂಡರು. ತಾವು ಕೂಡ ಈ ಪುಣ್ಯ ಕಾರ್ಯದಲ್ಲಿ ಸದಾಶಿವನಿಗೆ ಬೆಂಬಲವಾಗಿರುತ್ತೇವೆ ಎಂದಾಗ ಸದಾಶಿವನಿಗೆ ಹೇಳಲಸಾಧ್ಯವಾದ ಸಂತೋಷವಾಯಿತು. ಇತ್ತ ಗೌರಿಯ ಮಗುವೂ ಅಜ್ಜಅಜ್ಜಿಯರ ಆರೈಕೆಯಲ್ಲಿ ಆರೋಗ್ಯಕರವಾಗಿ ಬೆಳೆಯುತ್ತಿತ್ತು. ಮೊದಮೊದಲು ಎಳೆ ಕಂದನನ್ನು ಪಾಲಿಸಲು ಹೆಣಗಾಡಬೇಕಾಯಿತು. ತಾಯಿ ಎದೆ ಹಾಲು ಅಮೃತಕ್ಕೆ ಸಮಾನ ಎನ್ನುತ್ತಾರೆ, ಆದರೆ ಸೂಲಗಿತ್ತಿ ಒಂದು ಬಾರಿ ಕೊಟ್ಟ ಎದೆಹಾಲನ್ನು ಬಿಟ್ಟರೆ ಮುಂದೆ ಆ ಮಗು ಹಸುವಿನ ಹಾಲಿಗೆ ತೃಪ್ತಿಪಡುವಂತಾಯಿತು. ಕಫದ ತೊಂದರೆಯಿಂದ ಬಳಲುವಂತಾಯಿತು. ಆದರೆ ಅಜ್ಜಅಜ್ಜಿಯ ಜಾಗರೂಕತೆ ಪ್ರೀತಿಯಿಂದ ಚೇತರಿಸಿಕೊಂಡು ಮುದ್ದಾಗಿ ಬೆಳೆದಿತ್ತು. ಮಗು ನೋಡಲು ಕೂಡ ಗೌರಿಯಂತೆ ಕಾಣುತ್ತಿತ್ತು. ಸದಾಶಿವ ವಾರಕ್ಕೊಮ್ಮೆ ಶ್ರೀಪತಿ ರಾಯರ ಮನೆಗೆ ಬಂದು ಗೌರಿಯ ಮಗುವನ್ನು ನೋಡಿ ಎತ್ತಿಕೊಂಡು ಮುದ್ದಾಡುತ್ತಿದ್ದ ,ಗೌರಿಯ ಆ ಪುಟಾಣಿ ಪಾಪುವಿಗೆ ಆರಾಧನಾ ಎಂದು ನಾಮಕರಣವನ್ನು ಮಾಡಿದರು. ಆರಾಧನಾ ಮುದ್ದು ಮೊಮ್ಮಗಳು ಎನ್ನುವುದಕ್ಕಿಂತ ಮಗಳೇ ಆಗಿದ್ದಳು.ಗೌರಿಯ ಸಾವು ಅವರಿಗೆ ತೀವ್ರ ನೋವು ನೀಡಿದ್ದರೂ, ಮೊಮ್ಮಗಳು ಆರಾಧನ ಅವರ ನೋವನ್ನು ಅಳಿಸಿ ಹಾಕಿದ್ದಳು. ಈಗ ಅವರದು ನೆಮ್ಮದಿಯ ಸಂಸಾರವಾಗಿತ್ತು. ಇನ್ನು ಸದಾಶಿವನ ಮಡಿಕೇರಿ ಗೆಳತಿ ಗಂಗಾ ಏನಾದಳು! ಅವಳಿಗೇನಾಗಿರಬಹುದೆಂದು ಅನಿಸಬಹುದು. ಮಡಿಕೇರಿಯಲ್ಲಿ ಗಂಗಾ...

 ಮುಂದುವರಿಯುವುದು

✍🏻 *ನಾಗಶ್ರೀ ಎಸ್ ಭಂಡಾರಿ*
*ಮೂಡುಬಿದಿರೆ*

Comments

Popular posts from this blog

ಹೆಮ್ಮೆಯ ಭಂಡಾರಿ ಪ್ರತಿಭೆ : 4 - ಸಂದೀಪ್ ಭಂಡಾರಿ

ಸದಾಶಿವ. ಸಂಚಿಕೆ - 2

ಸದಾಶಿವ - ಸಂಚಿಕೆ-32