ಸದಾಶಿವ - ಸಂಚಿಕೆ - 59

*ಸದಾಶಿವ*
*ಸಂಚಿಕೆ - 59*

  ಅವರುಗಳು ಸ್ವಾಮೀಜಿಯಂದ ಮಾತುಗಳ ಬಗ್ಗೆ ಯೋಚಿಸುತ್ತಿದ್ದರು. ಗೌರಿಯ ಸಾವಿನ ನೋವು ಕೂಡ ಅಲ್ಪ ಮಟ್ಟಿಗೆ ತಗ್ಗಿತು. ಮರಣವೆನ್ನುವುದು ಮಾನವ ಜನ್ಮಕ್ಕೆ ಮಾತ್ರವಲ್ಲ ,ಹುಟ್ಟಿದ ಪ್ರತಿಯೊಂದು ಜೀವಿಯು ತನ್ನ ಕಾಲ ಬಂದಾಗ ಹೋಗಲೇ ಬೇಕು, ಸತ್ತವರ ಬಗ್ಗೆ ಚಿಂತಿಸಿ ಏನೂ ಪ್ರಯೋಜನವಿಲ್ಲ; ಎಂದುಕೊಂಡು ಎಲ್ಲರೂ ಆಶ್ರಮದಲ್ಲಿ ಅಂದು ವಿರಮಿಸಿದರು.ಗೌರಿಯ ಚಿತೆಯಲ್ಲಿದ್ದ   ಕಟ್ಟಿಗೆಗಳು ಉರಿದು ಬೂದಿಯಾಗಿದ್ದವು. ಜೀವನವೆಂಬ ಜಂಜಾಟ ಕೊನೆಗೆ ಬೂದಿಯೇ ಆಗುವುದು. ನಿರಾಯಸವಾಗಿ ಮರಣ ದೊರೆತವನೇ ಪುಣ್ಯವಂತ. ಎಲ್ಲರೂ ಸ್ವಾಮಿಗಳ ಆಶೀರ್ವಾದವನ್ನು ಪಡೆದುಕೊಂಡು ಹೊರಟು ನಿಂತರು. ಕೊನೆಯದಾಗಿ ಸದಾಶಿವ ಸ್ವಾಮಿಗಳ ಕಾಲಿಗೆರಗಿದಾಗ ಸ್ವಾಮಿಗಳು ಮಗೂ;ನಿನ್ನ ಜೀವನ ಇಲ್ಲಿಯವರೆಗೆ ಗೊತ್ತು ಗುರಿ ಇಲ್ಲದ; ನಿರ್ದಿಷ್ಟವಾದ ಯೋಚನೆ ಇಲ್ಲದೆ ಸಾಗುತ್ತಿತ್ತು ,ಆದರೆ ಇನ್ನು ಮುಂದೆ ನಿನ್ನಿಂದ ಹಲವಾರು ಮಹತ್ಕಾರ್ಯಗಳು ಆಗಬೇಕಿದೆ ,ಆ ಎಲ್ಲಾ  ಕಾರ್ಯಗಳು ತನ್ನಿಂದ ತಾನಾಗಿ ನಿನ್ನ ಕೈಗಳಿಂದಲೇ ನಡೆಯಬೇಕಿದೆ, ನಡೆಯುತ್ತದೆ ;ನಿನ್ನ ಮನೆಯಲ್ಲಿರುವ ತೊಟ್ಟಿಲ ಕಂದನೇ ನಿನಗೆ ದಾರಿ ತೋರಿಸುತ್ತದೆ ಎಂದು ಆಶೀರ್ವದಿಸಿದರು. ಎಲ್ಲರೂ ಸ್ವಾಮಿಗಳ ಆಶ್ರಮದಿಂದ ಭಾರವಾದ ಮನಸ್ಸು ಹೊತ್ತು ಹೊರಟರು. ಮನೆಗೆ ಮರಳಿದ ಸದಾಶಿವ ಸ್ವಾಮಿಗಳಂದ ಮಾತುಗಳ ಬಗ್ಗೆ ಯೋಚಿಸತೊಡಗಿದ, ಹೃದಯದಲ್ಲಿ ಗೌರಿಯ ಸಾವಿನ ನೋವು; ಮನಸ್ಸಿನಲ್ಲಿ ಮುಂದೇನು ಎಂಬ ಯೋಚನೆ ,ಆದರೆ ಯಾವುದರ ಬಗ್ಗೆ ನಾವು ಹೀಗೆ ಆಗಬೇಕೆಂದು ಯೋಚಿಸುತ್ತೇವೋ ಹಾಗೆ ಯಾವುದು ಆಗುವುದಿಲ್ಲ, ಸದಾಶಿವನ ಯೋಚನೆ,ಹಾಗೆ ಆಗಿತ್ತು. ಈಗವನು ಶೂನ್ಯದಲ್ಲಿ ದ್ದಾನೆ, ಒಂದಕ್ಕೇರುವ ಪ್ರಯತ್ನವನ್ನು ಮಾಡಲೇಬೇಕು. ಸದಾಶಿವ ಈಗ ಗೌರಿಯ ಯೋಚನೆಯಿಂದ ಹೊರಬಂದು ತನ್ನ ತಂದೆ ಮಾಡಿಟ್ಟ ಆಸ್ತಿಯಲ್ಲಿ ತೋಟದ ಕೆಲಸವನ್ನು ವಹಿಸಿಕೊಂಡ .ಒಂದಕರೆ ತೋಟವನ್ನು ತೆಂಗು ಕಂಗು, ಬಾಳೆ ಗಿಡಗಳನ್ನು ನೆಟ್ಟ. ಮಿಶ್ರ ತಳಿಯ ಕೃಷಿಯನ್ನು ಮಾಡಲು ಪ್ರಯತ್ನಿಸಿ ಯಶಸ್ವಿಯಾದ .ಒಂದು ಪುಟ್ಟ ಮಲ್ಲಿಗೆಯ ಗಿಡವನ್ನು ತಂದು ಮನೆಯ ಮುಂದೆ ನೆಟ್ಟ; ವರ್ಷ ಕಳೆದಾಗ ಚಪ್ಪರದಂತೆ ಮಲ್ಲಿಗೆ ಬಳ್ಳಿ ಹಬ್ಬಿತ್ತು ,ಮಲ್ಲಿಗೆಯ  ಸುವಾಸನೆ ಸುತ್ತಲೂ ಹರಡಿ ಮನಸ್ಸಿಗುಲ್ಲಾಸವನ್ನ ನೀಡುತ್ತಿತ್ತು..ಗೌರಿಗೆ ಮಲ್ಲಿಗೆಯೆಂದರೆ ಬಲು ಪ್ರೀತಿ, ಅವಳ ನೆನಪಿಗಾಗಿಯೇ ಮಲ್ಲಿಗೆಯ ಗಿಡವನ್ನು ಮನೆಯ ಮುಂದೆ ನೆಟ್ಟಿದ್ದ.ಅದರ ಸುವಾಸನೆ ಬಂದಾಗಲೆಲ್ಲಾ ಗೌರಿ ತನ್ನ ಬಳಿಯೇ ಇದ್ದಾಳೆ ಎಂದು ಹರುಷ ಪಡುತ್ತಿದ್ದ. ಸದಾಶಿವನ ತಂಗಿಯ ಮಗಳು ಭಕ್ತಿಗೂ ಈಗ ಒಂದು ವರುಷ ,ಸದಾಶಿವನ  ತಂಗಿ ಸುಮತಿಯ ಗಂಡ ದೂರದ ಮುಂಬಯಿಯಲ್ಲಿ ಕೆಲಸ ಮಾಡುತ್ತಿದ್ದ .ಆತನಿಗೆ ತಂದೆ ತಾಯಿ ಯಾರೂ ಇಲ್ಲದ ಕಾರಣ ಸುಮತಿ ತಾಯಿ ಮನೆಯಲ್ಲಿಯೇ ಇದ್ದಳು.ಸುಮತಿ ಗಂಡ ಬಲು ಸ್ವಾಭಿಮಾನಿ; ಹೆಂಡತಿ ತವರು ಮನೆಯಲ್ಲಿ ಇದ್ದರೂ ತನ್ನ ಹೆಂಡತಿ ಮಗುವಿಗೆ ಬೇಕಾಗುವಷ್ಟು ಖರ್ಚನ್ನು ತಾನೇ ನೀಡುತ್ತಿದ್ದ, ತನ್ನ ಹೆಂಡತಿ ಮಕ್ಕಳು ಅತ್ತೆ ಮನೆಯವರಿಗೆ ಭಾರವಾಗಬಾರದು ಎಂಬುದು ಅವನ ಯೋಚನೆ, ಹೀಗಿರಬೇಕಾದರೆ ಒಂದು ದಿನ ಭಕ್ತಿ ಸದಾಶಿವನನ್ನು ಕಂಡು ಅವನತ್ತ  ಪುಟ್ಟ ಪುಟ್ಟ ಹೆಜ್ಜೆಯನ್ನಿಡುತ್ತಾ ನಿಧಾನವಾಗಿ ನಡೆಯುತ್ತಾ ಬರತೊಡಗಿದಳು ಅವಳ ಕಾಲ್ಗೆಜ್ಜೆಯ ಘಲ್ ಘಲ್ ಧನಿ  ಕಿವಿಗಿಂಪು ನೀಡುತ್ತಿತ್ತು.ಪುಟ್ಟ ಮಗು ತನ್ನತ್ತಲೇ ಬರುತ್ತಿದ್ದದ್ದನ್ನು ಕಂಡು ಹರ್ಷಗೊಂಡ ಸದಾಶಿವ 
ಅವಳನ್ನೆತ್ತಿದ್ದಾಗ..

 ಮುಂದುವರೆಯುವುದು

 ✍🏻 *ನಾಗಶ್ರೀ ಎಸ್ ಭಂಡಾರಿ*
*ಮೂಡುಬಿದಿರೆ*

Comments

Popular posts from this blog

ಹೆಮ್ಮೆಯ ಭಂಡಾರಿ ಪ್ರತಿಭೆ : 4 - ಸಂದೀಪ್ ಭಂಡಾರಿ

ಸದಾಶಿವ. ಸಂಚಿಕೆ - 2

ಸದಾಶಿವ - ಸಂಚಿಕೆ-32