ಸದಾಶಿವ - ಸಂಚಿಕೆ - 53
ಸದಾಶಿವ
ಸಂಚಿಕೆ - 53
ಆಶ್ರಮ ವಾಸಿಗಳಿಗೆ ಭಯ ಶುರುವಾಯಿತು. ಎಷ್ಟಾದರೂ ಹೆಂಗಸರಿಂದ ದೂರವೇ ಉಳಿದವರು; ಆದರೆ ಗೌರಿಯನ್ನು ತಂಗಿಯಂತೆ, ತಾಯಿಯಂತೆ, ಆದರಿಸುತ್ತಿದ್ದರು. ಅವಳಲ್ಲಿ ಅಪಾರ ಪ್ರೀತಿಯನ್ನು ಹೊಂದಿದ್ದರು.ಕೂಡಲೆ ಓರ್ವ ಸ್ವಾಮಿಯನ್ನು ಊರಿನಾಚೆ ಕಳುಹಿಸಿ ಸೂಲಗಿತ್ತಿಯನ್ನು ಕರೆದುಕೊಂಡು ಬರಲು ಹೇಳಿದರು. ಆಕೆ ಬಂದ ಕೂಡಲೇ ಗೌರಿಯನ್ನು ಆರೈಕೆ ಮಾಡುತ್ತಾ;ಅಳ ಬೇಡಮ್ಮಾ ಎಂದು ಸಮಾಧಾನಿಸ ತೊಡಗಿದರು. ಆದರೂ ಹೆರಿಗೆಯಾಗುವ ಲಕ್ಷಣಗಳು ಕಂಡು ಬರಲಿಲ್ಲ ;ಏಕೆಂದರೆ ಮಗುವಿನ ಕತ್ತು ಮೇಲಿತ್ತು.ಕಾಲುಗಳು ಕೆಳಗಿದ್ದವು.ಹೆರಿಗೆ ಮಾಡಿಸಲು ಪ್ರಯಾಸ ವಾಯಿತು. ಕೊನೆಗೂ ಬಹಳ ಕಷ್ಟದಿಂದ ಮಗುವಿನ ಜನನವಾಯಿತು.ಆದರೆ ಪುಟ್ಟ ಕಂದಮ್ಮನ ಅಳುವನ್ನು ಕೇಳಿಸಿಕೊಂಡಾಕ್ಷಣವೇ ಗೌರಿ ಕಣ್ಣು
ಮುಚ್ಚತೊಡಗಿದಳು. ಪ್ರಜ್ಞೆ ತಪ್ಪಿರಬಹುದೆಂದು ಸೂಲಗಿತ್ತಿ ಅಂದುಕೊಂಡು, ಮುದ್ದಾದ ಹೆಣ್ಣು ಮಗುವನ್ನು ಎತ್ತಿಕೊಂಡು ಸ್ನಾನ ಮಾಡಿಸಲೆಂದು ಹೊರಬಂದಳು.ಆಶ್ರಮ ವಾಸಿಗಳೆಲ್ಲರೂ ಗೌರಿಗೆ ಸುಸೂತ್ರವಾಗಿ ಹೆರಿಗೆ ಯಾಗಲೆಂದೇ ಪ್ರಾರ್ಥಿಸುತ್ತಿದ್ದರು. ಸೂಲಗಿತ್ತಿ ಹೊರಬಂದಾಗ ಅವರೆಲ್ಲ ಅವಳ ಬಳಿ ಓಡಿ ಬಂದರು.ಮುದ್ದು ಮಗುವನ್ನು ಕಂಡು ಹರ್ಷಗೊಂಡರು. ಗೌರಿಯಂತೆ ಹಾಲು ಬಣ್ಣದಿಂದ, ಪೌಷ್ಟಿಕಾಂಶಯುಕ್ತ ಆಹಾರ ಸೇವನೆಯಿಂದ ಮಗು ಆರೋಗ್ಯವಾಗಿ ಕಳೆಕಳೆಯಾಗಿತ್ತು. ಎಲ್ಲರೂ ಕಾತುರದಿಂದ ಗೌರಿಯ ಆರೋಗ್ಯ ಹೇಗಿದೆ ಎಂದು ಕೇಳಿದಾಗ ಹೆರಿಗೆ ನೋವಿನ ಸುಸ್ತಿನಿಂದ ಮಲಗಿದ್ದಾಳೆ ಎಂದಳು. ಸರಿ! ವಿಶ್ರಾಂತಿ ತೆಗೆದುಕೊಳ್ಳಲಿ ಎಂದು ಕೊಳ್ಳುತ್ತಾ ಧ್ಯಾನ ಮಾಡಲು ಹೊರಟರು. ಸೂಲಗಿತ್ತಿ ಮಗುವನ್ನು ಬಿಸಿ ನೀರಿನಿಂದ ಸ್ನಾನ ಮಾಡಿಸಿ, ತಾನು ತಂದಿದ್ದ ಬಿಳಿದಾದ ಶುಭ್ರ ವಸ್ತ್ರದಲ್ಲಿ ಕಟ್ಟಿ ತಾಯಿಯ ಹತ್ತಿರ ಮಲಗಿಸಲೆಂದು ಒಳಹೊಕ್ಕಾಗ ,ಅಲ್ಲಿ ಕಂಡ ದೃಶ್ಯ ಅವಳನ್ನು ಗಾಬರಿಗೊಳಿಸಿತು. ಇತ್ತ ಸದಾಶಿವನಿಗೆ ತನ್ನಿಂದ ಏನೋ ದೂರವಾಗುತ್ತಿದೆ ಏನನ್ನೋ ಕಳೆದುಕೊಳ್ಳುತ್ತಿದ್ದೇನೆ ಎಂಬ ಭಾವನೆ ಕಾಡಿತು. ಹೌದು ಈ ಜೀವನವೇ ಹೀಗೆ ;ಬಯಸಿದ್ದೆಲ್ಲ ಬಳಿ ಇರುವಾಗ ನಮಗೆ ಅದರ ಮೌಲ್ಯದ ಅರಿವಿರುವುದಿಲ್ಲ; ಅದೇ ವಸ್ತು ನಮ್ಮಿಂದ ದೂರವಾದರೆ ಮನಸ್ಸಿಗಾಗುವ ಆಘಾತ ಅಷ್ಟಿಷ್ಟಲ್ಲ ,ಸದಾಶಿವನಿಗೆ ಅದೇ ಆಯಿತು, ಸೀದಾ ಮನೆಯಿಂದ ಹೊರನಡೆದು ,ಕಾಡಿನತ್ತ ಪಯಣ ಬೆಳೆಸಿದ. ಆಗ ರಾತ್ರಿಯಾಗಿತ್ತು ಆ ಕಗ್ಗತ್ತಲಿನಲ್ಲಿ ಒಬ್ಬನೆ ಒಂಟಿಯಾಗಿ ನಡೆದಾಗ ಗೌರಿಯ ನೆನಪು ಕಾಡಿತು, ಅಂದು ಕಾಡಿನಲ್ಲಿ ನಾನು ಗೌರಿ ಇಬ್ಬರೇ ಹೋಗುತ್ತಿರುವಾಗ ಗೌರಿ ಭಯಗೊಂಡಿದ್ದನ್ನು ನೆನೆಸಿಕೊಂಡು ನಗು ಮೂಡಿತ್ತು.ಕಾಡಿನಲ್ಲಿ ನಡೆಯುತ್ತಾ ಅಲ್ಲೊಂದು ಪಂಜು ಉರಿಯುತ್ತಿದ್ದನ್ನು ಕಂಡ ,ಕೆಲವೊಂದು ಮುಳಿಹುಲ್ಲಿನ ಗುಡಿಸಲು ಕಂಡುಬರುತ್ತಿತ್ತು. ಅದೇನೆಂದು ನೋಡೋಣ ಎಂದುಕೊಂಡು ಸದಾಶಿವ ಆ ಗುಡಿಸಲುನತ್ತ ಹೋಗಿ ನೋಡಿದಾಗ ಅದು ಆಶ್ರಮ ವಾಸಿಗಳ ಬಿಡಾರ ಎಂಬುದು ತಿಳಿಯಿತು.ಕತ್ತಲಿನಲ್ಲಿ ಬಂದ ಅಪರಿಚಿತನನ್ನು ಕಂಡು ಆಶ್ಚರ್ಯವಾಯಿತು. ಆದರೂ ಯಾರಪ್ಪಾ ನೀನು? ಈ ಅವೇಳೆಯಲ್ಲಿ ಇಲ್ಲಿಗೇಕೆ ಬಂದೆ ಎಂದು ಪ್ರಶ್ನಿಸಿದಾಗ; ಸ್ವಾಮಿಗಳೇ ನನಗೆ ಮನಃಶಾಂತಿ ಬೇಕು ,ಮನಸ್ಸು ಗೊಂದಲದ ಗೂಡಾಗಿದೆ, ನಾನು ತುಂಬಾ ಪ್ರೀತಿಸುತ್ತಿರುವವರಿಗೆ ತೊಂದರೆಯಾಗಿದೆ ಎಂದು ಮನಸ್ಸು ಹೇಳುತ್ತಿದೆ ,ಹೃದಯ ಅಭದ್ರತೆಯಿಂದ ಅಳುತ್ತಿದೆ ,ನನಗೆ ಶಾಂತಿ ಬೇಕು ಸ್ವಾಮಿಗಳೇ ಶಾಂತಿ ಬೇಕು ಎಂದು ಅಳತೊಡಗಿದ. ಆಗಲೇ ಸೂಲಗಿತ್ತಿ ಅಮ್ಮಾ
ಎಂದರಚಿದ ಸದ್ದು ಕೇಳಿಸ್ತು.
ಮುಂದುವರಿಯುವುದು
✍🏻 ನಾಗಶ್ರೀ.ಎಸ್.ಭಂಡಾರಿ
ಮೂಡಬಿದಿರೆ

Comments
Post a Comment