ಸದಾಶಿವ - ಸಂಚಿಕೆ - 48

ಸದಾಶಿವ


ಸಂಚಿಕೆ - 48

ನನ್ನ ತಮ್ಮ ಮುಂಬಯಿಗೆ ಹೋದವ ಬಾರದೆ ಇದ್ದುದರಿಂದ ಮನನೊಂದು ನಾನು ನಮ್ಮೂರು ಬಿಟ್ಟು; ನಿಮ್ಮೂರಿಗೆ ಬಂದೆ. ಏನು?ಎತ್ತ! ಎಂದು ವಿಚಾರಿಸದೆ ನಿನ್ನ ತಂದೆ ನನಗೆ ಕೆಲಸವನ್ನು ಕೊಟ್ಟರು.ಅವರಿಟ್ಟ ನಂಬಿಕೆಗೆ ನಾನು ಮೂಕನಾಗಿದ್ದೆ.  ಅವರ ಬಳಿ ಪ್ರಾಮಾಣಿಕವಾಗಿ ಕೆಲಸ ಮಾಡಬೇಕೆಂದು ಹಗಲು ಇರುಳೆನ್ನದೆ ದುಡಿದು;ಅಧಿಕ ಲಾಭಾಂಶ ಬರುವಂತಹ ಕಾರ್ಯತಂತ್ರಗಳನ್ನು ಮಾಡಿ ,ನಿನ್ನ ತಂದೆಯ ವಿಶ್ವಾಸ ಗಳಿಸಿಕೊಂಡೆ. ನಿನ್ನ ಮತ್ತು ನಿನ್ನ ತಂದೆಯ ಬಾಂಧವ್ಯವನ್ನು ಕಂಡಾಗ ನನಗೂ ನನ್ನ ಮನೆಯವರ ನೆನಪಾಯಿತು ,ಅದಕ್ಕಾಗಿ ನಿಮ್ಮ ಬಳಿ ಸ್ನೇಹಿತರನ್ನು ಭೇಟಿ ಮಾಡುತ್ತೇನೆಂದು ಹೇಳಿ ಊರಿಗೆ ಬಂದಿದ್ದೆ. ಊರಿಗೆ ಬಂದ ನನಗೆ ಆಘಾತ ಕಾದಿತ್ತು.ನನ್ನ ಪ್ರೀತಿಯ ಅಜ್ಜಿ ಆರೋಗ್ಯ ಹದಗೆಟ್ಟು ಆಸ್ಪತ್ರೆಯಲ್ಲಿದ್ದರು. ಇತ್ತ ನಾನು ಮೆಚ್ಚಿದ ಹುಡುಗಿ, ನನ್ನ ಬಾಳ ಗೆಳತಿ, ಗೌರಿಗೆ ಮದುವೆಯಾಗಿತ್ತು. ಆದರೆ ಅವಳ ಗಂಡ ಸರಿ ಇಲ್ಲದ ಕಾರಣ, ಅವಳನ್ನು ಹಿಂಸಿಸಿ,ಖುಷಿಪಡುತ್ತಿದ್ದ. ಅವನು ಕೊಟ್ಟ ಕಷ್ಟವನ್ನು ತಾಳಲಾರದೇ ಮನನೊಂದ ಗೌರಿ ಮನೆ ಬಿಟ್ಟು ಹೋದಳು.ನಾನು ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದ ಗೌರಿ ನನ್ನಿಂದ ದೂರವಾದಳು. ಅವಳನ್ನು ಹುಡುಕಾಡಿದ ಜಾಗವೇ ಇಲ್ಲ.ಊರಿಡೀ ಹುಚ್ಚನಂತೆ ಅಲೆದಾಡಿದೆ. ಗೌರಿಯ ಸುಳಿವು ಸಿಗಲಿಲ್ಲ.ಅಂದೊಮ್ಮೆ ಅವಳು ನನ್ನನ್ನು ಹುಡುಕಿಕೊಂಡು ಮಡಿಕೇರಿಗೆ ಬಂದ ವಿಚಾರವೂ ತಿಳಿಯಿತು. ಇನ್ನೂ ತಡ ಮಾಡುವುದು ಸರಿಯಲ್ಲವೆಂದು ಗೌರಿಯ ಅನ್ವೇಷಣೆಗಾಗಿ ಇಲ್ಲಿಗೆ ಬರಬೇಕಾಯಿತು. ಗೌರಿಯ  ಹುಡುಕಾಟಕ್ಕೆ ನಿನ್ನ ಸಹಾಯ ಬೇಕು ಗಂಗಾ! ಎಂದು ಮಾತು ನಿಲ್ಲಿಸಿದ. ಸದಾಶಿವನಿಗೆ ಇದಕ್ಕಿಂತ ಮೊದಲೇ ಒಂದು ಹುಡುಗಿಯ ಜೊತೆ ಪ್ರೇಮವಿತ್ತು; ಎಂಬ ವಿಚಾರವನ್ನು ಕೇಳಿದ ಗಂಗಾಳಿಗೆ ಬರಸಿಡಿಲು ಬಡಿದಂತಾಯಿತು. ಕಟ್ಟಿಕೊಂಡಿದ್ದ ಕನಸಿನ ಗೋಪುರ ಕುಸಿದು ಬಿತ್ತು. ಮುಂದಿನ ಜೀವನ ಬಗ್ಗೆ ಇರಿಸಿಕೊಂಡಿದ್ದ ಆಸೆ, ಭರವಸೆಗಳು, ಮದುವೆಯ ನಂತರದ ಸದಾಶಿವನ ಜೊತೆಗೆ ತಾನು ಹೇಗಿರಬೇಕು ಎಂಬ ಕಲ್ಪನೆಗಳು ಕರಗಿ ಹೋಯಿತು.ಕಣ್ಣಿಂದ ಅರಿವಿಲ್ಲದೆಯೇ ಕಣ್ಣೀರು ಹರಿಯತೊಡಗಿತು. ಗಂಗಾಳ ಮುಖವನ್ನು  ನೋಡಿದ ಸದಾಶಿವನಿಗೆ ಗಂಗಾ ಅಳುತ್ತಿರುವುದೇಕೆ ಎಂದು ಆಶ್ಚರ್ಯವಾಯಿತು. ಗಂಗಾ ಏಕೆ ನೀನು ಅಳುತ್ತಿರುವೆ? ಏನಾಯಿತೆಂದು ಕೇಳಿದಾಗ ಗಂಗಾ ಕಣ್ಣೀರನ್ನು ಒರೆಸಿಕೊಂಡು ನಿನ್ನ ಪ್ರೀತಿಯ ಗೌರಿಯ ನೋವಿನ ಕಥೆಯನ್ನು ಕೇಳಿ ಅಳು ಬಂದುಬಿಟ್ಟಿತು ಎಂದಳು. ಆಗ ಸದಾಶಿವನ ಹೌದು ಗಂಗಾ! ನನ್ನ ಗೌರಿ ಸುಕೋಮಲೆ, ಪುಟ್ಟ ನೋವನ್ನು ಕೂಡ ಸಹಿಸದಂಥವಳಿಗೆ ದೇವರದೆಷ್ಟು  ಶಿಕ್ಷೆ ವಿಧಿಸಿದನಲ್ಲವೇ ಎಂದು ಹೇಳಿದ.ಆಗ ಗಂಗಾಳು ಹೌದೆಂದಳು. ಆ ಸಮಯದಲ್ಲಿ ಗಂಗಾಳ ಹೃದಯ ಒಡೆದು ಸಹಸ್ರ ಚೂರುಗಳಾಗಿತ್ತು. ಬಿರುಗಾಳಿಯ ಹೊಡೆತಕ್ಕೆ ಸಿಲುಕಿದ್ದ ತರಗೆಲೆಯಂತೆ, ಅಲೆಗಳ ರಭಸಕ್ಕೆ ಸಿಲುಕಿದ ಮೀನಿನಂತೆ, ಬೀರಿದ ಭೂಮಿಯಂತೆ, ಗಂಗಾಳ ಒಡಲು ನೋವಿನಿಂದ ಚೀರುತ್ತಿತ್ತು. ಸದಾ ನೀನು ನನಗೆ ಬೇಕು; ನನ್ನ ಹೃದಯ ಸಾಮ್ರಾಜ್ಯದಲ್ಲಿ ನಿನ್ನ ಬಿಟ್ಟು ಬೇರಾರಿಗೂ ಸ್ಥಾನವಿಲ್ಲವೆಂದು ಚೀರಿ ಹೇಳಬೇಕೆನಿಸಿತ್ತು. ಆದರೆ ಆ ಮಾತುಗಳು ಗಂಟಲಿನಲ್ಲಿಯೇ ಉಳಿದುಕೊಂಡಿತ್ತು. ಗಂಗಾ ಎಷ್ಟು ಅತ್ತಿದ್ದಳೆಂದರೆ ಕಣ್ಣುಗಳು ಕೆಂಪಾಗಿ ಊದಿಕೊಂಡಿದ್ದವು. ಗಂಗಾಳ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡ ಸದಾಶಿವ ನನ್ನ ಜೀವನದ ನೋವಿನ ಕಥೆಯನ್ನು ಹೇಳಿ ನಿನ್ನ ಮನಸ್ಸಿಗೂ ನೋವು ಮಾಡಿದೆ;ಎಂದು ಪಶ್ಚಾತ್ತಾಪ ಪಟ್ಟ. ಅದು ಸರಿ ನೀನು ನನ್ನನ್ನು ಕರೆದುಕೊಂಡು ಬರಲು ಕಾರಣವೇನು ಎಂದು ಕೇಳಿದಾಗ...

 ಮುಂದುವರೆಯುವುದು

✍🏻 ನಾಗಶ್ರೀ ಎಸ್ ಭಂಡಾರಿ ಮೂಡಬಿದಿರೆ

Comments

Popular posts from this blog

ಹೆಮ್ಮೆಯ ಭಂಡಾರಿ ಪ್ರತಿಭೆ : 4 - ಸಂದೀಪ್ ಭಂಡಾರಿ

ಸದಾಶಿವ. ಸಂಚಿಕೆ - 2

ಸದಾಶಿವ - ಸಂಚಿಕೆ-32