ಸದಾಶಿವ - ಸಂಚಿಕೆ- 46

ಸದಾಶಿವ

ಸಂಚಿಕೆ- 46

    ಸದಾಶಿವನ ಹೃದಯ ಗೊಂದಲದ ಗೂಡಾಗಿತ್ತು. ಏನಾದರಾಗಲಿ ಇಂದು ಗಂಗಾಳ ಬಳಿ ನನ್ನ ಮತ್ತು ಗೌರಿಯ ಪ್ರೇಮ ಪ್ರಕರಣವನ್ನು ಹೇಳಿಬಿಡಬೇಕು. ಆಗ ಸುಬ್ರಹ್ಮಣ್ಯ ಸ್ವಾಮಿ ಅವರಿಂದಲೂ ನನಗೆ ಗೌರಿಯನ್ನು ಹುಡುಕಲು ಸಹಾಯ ದೊರಕಬಹುದೆಂದು, ಯೋಚಿಸುತ್ತಿದ್ದ .ಇತ್ತ ಗಂಗಾ ಕೂಡ ಇಂದು ಹೇಗಾದರೂ ಸದಾಶಿವನಲ್ಲಿ ನನ್ನ ಪ್ರೇಮವನ್ನು ಹೇಳಿಯೇ ಬಿಡಬೇಕೆಂದು ದೃಢ ನಿರ್ಧಾರವನ್ನು ಮಾಡಿಕೊಂಡಿದ್ದಳು. ಗಣೇಶನ  ದೇವಸ್ಥಾನಕ್ಕೆ ಕಾಲು ದಾರಿಯ ಮೂಲಕ ಇಬ್ಬರೂ ನಡೆಯುತ್ತಿದ್ದರು. ಆಲೋಚನೆಗಳು ಇಬ್ಬರದು ಬೇರೆ ಬೇರೆ; ಆದರೆ  ಆಸೆಯೊಂದೇ. ನಾವು ಪ್ರೀತಿಸಿದ್ದು ನಮಗೆ ದೊರಕಲೆಂದು; ಈ ಆಸೆಗಳೇ ಹೀಗೆ ಕೆಲವೊಮ್ಮೆ ಕಾಡಿಸುತ್ತೆ ,ಪೀಡಿಸುತ್ತೆ, ಕೈಗೆ ಸಿಕ್ಕಿತು ಎನ್ನುವಷ್ಟರಲ್ಲಿ ಜಾರಿ ಹೋಗುತ್ತೆ; ಅದರ ಹುಡುಕಾಟದಲ್ಲಿ ಮಗದೊಂದು ಅಮೂಲ್ಯವಾದ ವಸ್ತು ಬಳಿ ಬಂದರೂ ಅದರತ್ತ ಗಮನವೇ  ಹೋಗುವುದಿಲ್ಲ. ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ಸರಿಯುವುದು ಮನ ಎಂಬಂತೆ* ಸದಾಶಿವ ಪ್ರೀತಿಯ ಹುಚ್ಚು ವ್ಯಾಮೋಹದಲ್ಲಿ ಜೀವಕ್ಕಿಂತಲೂ ಮಿಗಿಲಾಗಿ ಪ್ರೀತಿಸುತ್ತಿರುವ ಗಂಗಾಳ ಪ್ರೀತಿಯನ್ನು ಕಳೆದುಕೊಳ್ಳುತ್ತಾನೆನೋ; ಇಬ್ಬರೂ ಮೌನವಾಗಿ ನಡೆಯುತ್ತಿದ್ದಾರೆ, ಯಾರೊಬ್ಬರೂ ಮಾತನಾಡುತ್ತಿಲ್ಲ ;
ಅವನೇ ಮಾತನಾಡಲಿ ಎಂದು ಇವಳು ;ಇವಳೇ ಮಾತನಾಡಲಿ ಎಂದು ಅವನು ,ದೇವಸ್ಥಾನ ಹತ್ತಿರ ಬಂದಿತು.ಇಬ್ಬರೂ ದೇವರಿಗೆ ಅರ್ಪಿಸಲು ಹಣ್ಣು ಕಾಯಿಯನ್ನು ತೆಗೆದುಕೊಂಡರು. ದೇವಸ್ಥಾನದ ಒಳ ಹೊಕ್ಕು ಗಣಪತಿಯ ಭವ್ಯ ಮೂರ್ತಿಗೆ ನಮಸ್ಕರಿಸಿದರು.ಇಬ್ಬರ ಬೇಡಿಕೆಯು ಗಣೇಶನನ್ನು ಮುಟ್ಟಿತ್ತು ;ಆದರೆ ಗಣೇಶನೇನು ಮಾಡಲು ಸಾಧ್ಯ ಇಬ್ಬರ ಆಸೆಗಳು ವಿರುದ್ಧ ದಿಕ್ಕಿನಲ್ಲಿ ಇವೆ. ಗಣೇಶನೋ ಮೊದಲು ಬ್ರಹ್ಮಚಾರಿ .ಗಂಗೆ, ಗೌರಿ, ಸದಾಶಿವನ ತ್ರಿಕೋನ ಪ್ರೇಮ ಸರಣಿಯನ್ನು ಹೇಗೆ ತಾನೇ
ಸರಿಪಡಿಸಿಯಾನು, ಆದರೂ ಮೂವರಿಗೂ ಒಳ್ಳೆಯದಾಗಲೆಂದು  ಆಶೀರ್ವದಿಸಿ ಬಿಟ್ಟ.ಅರ್ಚಕರು ಹಣ್ಣು ಕಾಯಿಯನ್ನು ದೇವರಿಗೆ ಅರ್ಪಿಸಿ ಪ್ರಸಾದವನ್ನು ನೀಡಿದರು. ಅದನ್ನು ತೆಗೆದುಕೊಂಡು ದೇವಸ್ಥಾನಕ್ಕೆ ಮೂರು ಸುತ್ತು ಬಂದು ,ಹೊರಗೆ ಬಂದರು.ಅದು ಹಳೆಯ ಕಾಲದ ದೇವಸ್ಥಾನವಾದುದರಿಂದ, ಜಾತ್ರೆಯ ಸಮಯ ಕೂಡ ಅಲ್ಲದ್ದರಿಂದ ಜನಸಂಖ್ಯೆ ವಿರಳವಾಗಿತ್ತು .ಗಂಗಾ ಸದಾಶಿವನಲ್ಲಿ ತನ್ನ ಪ್ರೀತಿಯನ್ನು ಹೇಳಿಕೊಳ್ಳಲು ಒಂದು ಏಕಾಂತ ಜಾಗವನ್ನು ಹುಡುಕಿ ,ಅಲ್ಲಿಗೆ ಅವನನ್ನು ಕರೆದುಕೊಂಡು ಬಂದು ಕುಳಿತುಕೊಳ್ಳಲು ಹೇಳಿದಳು. ಇಬ್ಬರೂ ಕುಳಿತುಕೊಂಡರು. ಗಂಗೆಯ ಪಕ್ಕ ಕುಳಿತುಕೊಂಡ ಸದಾಶಿವನಿಗೆ ಗೌರಿಯ ನೆನಪು ಕಾಡಿತು. ಹಿಂದೊಮ್ಮೆ ಗೌರಿ ಪದವಿಯಲ್ಲಿ ಕಲಿಯುತ್ತಿದ್ದ ಸಂದರ್ಭದಲ್ಲಿ ತೋಟದಲ್ಲಿ ಕೆಲಸ ಮಾಡುತಿದ್ದ ಸದಾಶಿವನನ್ನು ಎಳೆದುಕೊಂಡು, ಸುತ್ತಾಡಿಕೊಂಡು ಬರೋಣ ಎಂದು ಕರೆದುಕೊಂಡು ಹೋಗಿದ್ದಳು.ಅಂದೇ ಗೌರಿ ಸದಾಶಿವನಲ್ಲಿ ತನ್ನ ಪ್ರೇಮವನ್ನು ಹೇಳಿಕೊಳ್ಳಲು ಬಯಸಿದ್ದಳು. ಸದಾಶಿವನು ಗೌರಿಯಲ್ಲಿ ಈ ವಿಚಾರವನ್ನು ಮಾತನಾಡಬೇಕೆಂದು ಬಯಸಿದ್ದ.ಗೌರಿಗೆ ಸದಾಶಿವನ ಕೈ ಹಿಡಿದುಕೊಂಡಾಗಲೆಲ್ಲಾಇವನು ನನ್ನವನು,ಇವನೇ ನನ್ನ ಗಂಡನಾಗಬೇಕು ಎಂಬ ಭಾವ ಕಾಡುತ್ತಿತ್ತು. ಸದಾಶಿವನೂ ಇದಕ್ಕೆ ಹೊರತಾಗಿರಲಿಲ್ಲ. ಗೌರಿ ನನ್ನವಳು ನನಗಾಗಿ ಹುಟ್ಟಿರುವವಳು ಎಂಬ ಭಾವನೆ ಚಿಕ್ಕನಿಂದಲೇ ಬೇರೂರಿತ್ತು. ಗೌರಿ  ಸದಾಶಿವ ಊರಿನ ಈಶ್ವರನ ದೇವಸ್ಥಾನಕ್ಕೆ ಕೈಮುಗಿದು, ಹೊರಾಂಗಣದಲ್ಲಿನ ಜಗಲಿಯಲ್ಲಿ ಹತ್ತಿರ ಹತ್ತಿರ ಕುಳಿತರು.ಗೌರಿ ತನ್ನ ಪ್ರೇಮವನ್ನು ಸದಾಶಿವನಲ್ಲಿ ಹೇಳಬೇಕೆನ್ನುವಾಗ..

 ✍🏻ಮುಂದುವರಿಯುವುದು

 ನಾಗಶ್ರೀ.ಎಸ್. ಭಂಡಾರಿ ಮೂಡುಬಿದಿರೆ

Comments

Popular posts from this blog

ಹೆಮ್ಮೆಯ ಭಂಡಾರಿ ಪ್ರತಿಭೆ : 4 - ಸಂದೀಪ್ ಭಂಡಾರಿ

ಸದಾಶಿವ. ಸಂಚಿಕೆ - 2

ಸದಾಶಿವ - ಸಂಚಿಕೆ-32