ಸದಾಶಿವ - ಸಂಚಿಕೆ- 45
ಸದಾಶಿವ
ಸಂಚಿಕೆ- 45
ಸನ್ಯಾಸ ಜೀವನ ಸುಲಭದ ಹಾದಿಯಲ್ಲ; ಕಲ್ಲು ಮುಳ್ಳುಗಳಲ್ಲೂ ಬರಿಗಾಲಲ್ಲೇ ನಡೆಯಬೇಕು. ಸರಳ ಆಹಾರವನ್ನೇ ಸೇವಿಸಬೇಕು. ಕೆಲವೊಮ್ಮೆ ಬರೀ ಹೊಟ್ಟೆಯಲ್ಲಿ ಇರಬೇಕು; ನೀರು ಕುಡಿದೇ ಬದುಕಬೇಕು; ಸದಾ ನಿರಾತಂಕವಾಗಿ ಮೌನಿಯಾಗಿ ಬಾಳಬೇಕು.ಆಸೆಗಿಲ್ಲಿ ಜಾಗವೇ ಇಲ್ಲ. ಭಾವನೆಗಳು, ಬಯಕೆಗಳು, ಆಕಾಂಕ್ಷೆಗಳಿಂದ ದೂರವಿರಬೇಕು.
ನೀನೆಷ್ಟಾದರೂ ಸುಖ ಜೀವನದಿಂದ ಬಂದವಳು; ನಿನಗೇಕೆ ಕಷ್ಟ ಕಾರ್ಪಣ್ಯದ ಜೀವನ; ಹಿಂದಿರುಗಿ ನಿನ್ನ ತಂದೆ ತಾಯಿಯ ಬಳಿಗೆ ಹೋಗು ;ಇಷ್ಟರಲ್ಲಾಗಲೇ ನಿನ್ನದೇನು ತಪ್ಪಿಲ್ಲವೆಂದು; ನಿನ್ನ ಗಂಡನ ಮನೆಯವರದ್ದೇ ತಪ್ಪೆಂದು ತಿಳಿದಿರುತ್ತಾರೆ; ನೀನು ಕಾಣೆಯಾಗಿರುವುದರಿಂದ ಅವರು ಗಾಭರಿಯಾಗಿ ನಿನ್ನನ್ನು ಹುಡುಕುತ್ತಿರಬಹುದು. 'ನೀನು ಹಿಂತಿರುಗು ಮಗು' ಎಂದಾಗ ಗೌರಿ; *ಕಾಯುವಿಕೆ, ಹುಡುಕುವಿಕೆ,ಎನ್ನುವುದು ಕೆಲವು ದಿನ ,ಕೆಲವು ತಿಂಗಳು ,ಕೆಲವು ವರ್ಷಗಳವರೆಗೆ ಮಾತ್ರ; ನಂತರ ಎಲ್ಲವೂ ,ಎಲ್ಲರೂ ಮರೆತು ಹೊಸ ಜೀವನದತ್ತ ಮುಖ ಮಾಡುತ್ತಾರೆ*
ಸ್ವಾಮಿಗಳೇ ನಾನು ಈ ಮಾನವ ಜನ್ಮದಲ್ಲಿ ಕಷ್ಟ ಸುಖ ಇವೆರಡರ ಮುಖವನ್ನು ಸಮಾನವಾಗಿ ನೋಡಿದ್ದೇನೆ. ಈಗ ನನಗೆಯಾವುದರ ಮೇಲೂ ಆಸೆ ಇಲ್ಲ ,ನನಗೆ ಈ ಸಾಂಸಾರಿಕ ಜೀವನದ ಕಟ್ಟುಪಾಡುಗಳ ಮೇಲಿನ ಆಸಕ್ತಿ ಹೊರಟು ಹೋಗಿದೆ.ಹೃದಯ ಶೂನ್ಯವಾಗಿದೆ. ಈಶ್ವರನ ಧ್ಯಾನದಲ್ಲೇ ಅವನ ಕೃಪಾಕಟಾಕ್ಷಕ್ಕೆ ಅನವರತ ಅವನ ಧ್ಯಾನವನ್ನು ಮಾಡುತ್ತೇನೆ.ಈ ಲೋಕದ ಗೊಡವೆ ನನಗೆ ಬೇಡ, ಶಿವಸಾನಿಧ್ಯವೊಂದು ನನಗೇ ದೊರೆತರೆ ಸಾಕು. ಮಾತಾಪಿತರು,ಸ್ನೇಹಿತರು, ಬಂಧುಗಳು ,ಇವರೆಲ್ಲರ ಬಂಧನದಿಂದ ಕಳಚಿಕೊಂಡು ನಾನು ಸ್ವತಂತ್ರವಾಗಬೇಕು. ನಾನು ಅನಂತವಾದ ಈ ವಿಶ್ವದಲ್ಲಿ ಮೋಕ್ಷವನ್ನು ಹೊಂದಲು ಕಠಿಣ ನಿಯಮಗಳನ್ನು ಪಾಲಿಸಿಯಾದರೂ ಭಗವದ್ ಕೃಪೆಯನ್ನು ಪಡೆಯಬೇಕು. ಎನ್ನುವಾಗ ಗೌರಿಯ ಕಣ್ಣುಗಳು ಭಕ್ತಿ ಪರವಶತೆಯಿಂದ ಹೊಳೆಯುತ್ತಿದ್ದವು. ಹಣೆಯಲ್ಲಿ ರಾರಾಜಿಸುತ್ತಿದ್ದ ಕುಂಕುಮದ ಬೊಟ್ಟು ಸಾಕ್ಷಾತ್ ಮಹಾಲಕ್ಷ್ಮಿಯೇ ಮಾತನಾಡುತ್ತಿರುವಂತೆ ಸ್ವಾಮಿಗಳಿಗೆ ಅನ್ನಿಸಿತು. 'ಗೌರಿ ಸಾಮಾನ್ಯ ಹೆಣ್ಣಲ್ಲ' ಅವಳು ಕೇವಲ ಮಾನವ ಜನ್ಮದಲ್ಲಿ ಹುಟ್ಟಿದ್ದಾಳಷ್ಟೇ, ಅವಳಲ್ಲೇನೋ ಶಕ್ತಿ ಇದೆ. ಅಚಲವಾದ ದೃಢ ಭಕ್ತಿಯಿದೆ.ಇವಳೊಳಗೆ ಹುದುಗಿರುವ ಶಕ್ತಿಯ ಅರಿವು ಇವಳಿಗಿಲ್ಲದಿರಬಹುದು.ಅದಕ್ಕಾಗಿ ಕಷ್ಟಗಳನ್ನು ಅನುಭವಿಸಿ ಭಗವದ್ ಸಾಕ್ಷಾತ್ಕಾರದ ಸಂಕಲ್ಪವನ್ನು ಮಾಡಿಕೊಂಡಿರಬಹುದೆಂದು ಯೋಚಿಸಿದರು.ನಿನ್ನೆ ಇವಳನ್ನು ಒತ್ತಾಯ ಮಾಡಿ ಪ್ರಯೋಜನವಿಲ್ಲವೆಂದು, ಅವರಿಚ್ಛೆಯಂತೆ ಆಗಲೆಂದು ಹಾರೈಸಿದರು. ಇತ್ತ ಸದಾಶಿವ ಸುಬ್ರಹ್ಮಣ್ಯ ಸ್ವಾಮಿಯಲ್ಲಿ ಮಾತನಾಡಲೆಂದು ಹೊರ ಬಂದ ಸುಬ್ರಹ್ಮಣ್ಯ ಸ್ವಾಮಿಯು ,ಸದಾಶಿವನಲ್ಲಿ ಮಾತನಾಡಲು ಕಾಯುತ್ತಿದ್ದರು. ಅಷ್ಟರಲ್ಲಿ ಎಲ್ಲಿದ್ದಳೋ ಗಂಗಾ ಓಡಿ ಬಂದು ಸದಾಶಿವನ ಮುಂದೆ ನಿಂತಳು.ನಾವಿಬ್ಬರು ಶಿವಾಲಯಕ್ಕೆ ಹೋಗಿ ಬರೋಣ ನಿನ್ನಲ್ಲಿ ಸ್ವಲ್ಪ ಮಾತನಾಡಲಿದೆ ಎಂದು ಹೇಳಿದಾಗ ;ಸದಾಶಿವನಿಗೆ ಕಸಿವಿಸಿಯಾಯಿತು. ಸುಬ್ರಹ್ಮಣ್ಯ ಸ್ವಾಮಿಗೆ ಏನು ಅನ್ನಿಸಲಿಲ್ಲ, ಏಕೆಂದರೆ ;ಅವಳ ಪ್ರೇಮದ ವಿಚಾರ ಅವರಿಗೆ ತಿಳಿದಿತ್ತು. ಹಾಗಾಗಿ ಹೋಗಿ ಬನ್ನಿ ಎಂದು ಒಪ್ಪಿಗೆ ಇತ್ತರು. ಇಬ್ಬರೂ ಒಟ್ಟಿಗೆ ಹೆಜ್ಜೆ ಹಾಕುತ್ತಾ ನಡೆಯತೊಡಗಿದರು.
ಗೌರಿ ಸದಾಶಿವ ಮುಖವನ್ನೇ ನೋಡುತ್ತಿದ್ದಳು.ಆದರೆ ಸದಾಶಿವ ಏನನ್ನೋ ಯೋಚಿಸುತ್ತಾ ಮೌನವಾಗಿ ಹೆಜ್ಜೆ ಹಾಕುತ್ತಿದ್ದ.
ಮುಂದುವರಿಯುವುದು
✍🏻 ನಾಗಶ್ರೀ.ಎಸ್.ಭಂಡಾರಿ ಮೂಡುಬಿದಿರೆ

Comments
Post a Comment