ಸದಾಶಿವ - ಸಂಚಿಕೆ - 44
ಸದಾಶಿವ
ಸಂಚಿಕೆ - 44
ಗೌರಿ ತನ್ನನ್ನು ಹುಡುಕಿಕೊಂಡು ಮಡಿಕೇರಿಗೆ ಹೋಗಿದ್ದರೆ ಎಂಬ ಅನುಮಾನ ಕಾಡಿತು.ಆ ಅನುಮಾನವೇ ಬಲವಾಯ್ತು. ಸರಿ ಇನ್ನು ತಡ ಮಾಡುವುದು ಸರಿಯಲ್ಲವೆಂದು ಮಡಿಕೇರಿಗೆ ತನ್ನ ಪ್ರಯಾಣವನ್ನು ಬೆಳೆಸಿದ.ಇತ್ತ ಗಂಗಾ ಸ್ನೇಹಿತರ ಮನೆಗೆಂದು ಹೊರಟಿದ್ದ ಸದಾಶಿವ ಇಷ್ಟು ದಿನ ದಿನವಾದರೂ ಬರಲಿಲ್ಲವೇಕೆಂದು ನೊಂದುಕೊಂಡಳು. ಸುಬ್ರಹ್ಮಣ್ಯ ಸ್ವಾಮಿಗೂ ಮಗಳ ನೋವಿನ ಅರಿವಾಯಿತು. ಆದರೆ ಸದಾಶಿವನ ಸ್ನೇಹಿತರು ಎಲ್ಲಿರುವರು ,ಅವರ ಊರು ಯಾವುದಿರಬಹುದೆಂಬ, ಕನಿಷ್ಠ ಅಂದಾಜು ಕೂಡ ಅವನಿಗಿರಲಿಲ್ಲ. ಸದಾಶಿವನ ಯೋಚನೆಯಿಂದಲೇ ಕೃಷಳಾಗುತ್ತಿದ್ದ ಗಂಗಾಳನ್ನು ಕಂಡು ಅವರಿಗೆ ಕರುಳು ಕಿವುಚಿದಂತಾಗುತ್ತಿತ್ತು ಆದರೇನು ಮಾಡುವುದು ಅದಕ್ಕಾವ ಪರಿಹಾರ ಉಪಾಯವೂ ಸುಬ್ರಹ್ಮಣ್ಯ ಸ್ವಾಮಿಗೆ ತಿಳಿದಿರಲಿಲ್ಲ.ಗಂಗಾಳ ನೋವು ಕೇಳಿದಂತೆ ಆ ದೇವರು ಸದಾಶಿವನನ್ನು ಮತ್ತೆ ಗಂಗಾಳ ಬಳಿ ಬರುವಂತೆ ಮಾಡಿದ. ಅಂದು ಅಲೆಮಾರಿಯಾಗಿ ಬಂದಿದ್ದ ಸದಾಶಿವ ಈಗ ಬಾಳ ಗೆಳತಿಯನ್ನು ಹುಡುಕಿಕೊಂಡು ಪ್ರೇಮಿಯಾಗಿ ಬಂದಿದ್ದ. ಸದಾಶಿವನನ್ನು ಎದುರು ನೋಡುತ್ತಾ ಬಾಗಿಲ ಮುಂದೆ ನಿಂತಿದ್ದ ಗಂಗಾಳಿಗೆ ಸದಾಶಿವ ಮನೆಯ ಮುಂದಿನ ಗೇಟು ದಾಟಿಕೊಂಡು ಒಳಗೆ ಬರುವುದನ್ನು ಕಂಡಾಗ ಆದ ಸಂತಸ ಅಷ್ಟಿಷ್ಟಲ್ಲ.ಓಡಿ ಬಂದು ಸದಾಶಿವನ ಮುಂದೆ ನಿಂತಳು,ಅವನನ್ನು ಕಂಡಾಕ್ಷಣ ಅವಳಿಗೆ ದುಃಖ ಉಕ್ಕೇರಿ ಬಂದು ಕಣ್ಣೀರು ಧಾರಾಕಾರವಾಗಿ ಹರಿಯತೊಡಗಿತು. ಗಂಗಾ ಅಳುತ್ತಿರುವುದೇಕೆ ಎಂದು ಸದಾಶಿವನಿಗೆ ಅರ್ಥವಾಗಲಿಲ್ಲ.ನಾನು ಇಷ್ಟು ದಿನ ಬಾರದೆ ಇರುವುದಕ್ಕೆ ಅಳುತ್ತಿರಬಹುದು ಅಂದುಕೊಂಡ.
ಸದಾಶಿವನನ್ನು ಕಂಡ ಖುಷಿಯಲ್ಲಿ ಗಂಗಾ ಮನೆಯೊಳಗೆ ಓಡಿ ತನ್ನ ತಂದೆಗೆ ವಿಷಯ ತಿಳಿಸಿದಳು.ಈರ್ವರೂ ಸದಾಶಿವನನ್ನು ಒಳ ಬರ ಮಾಡಿಕೊಂಡರು. ಸುಬ್ರಹ್ಮಣ್ಯ ಸ್ವಾಮಿ
ಸದಾಶಿವನನ್ನು ಕಂಡ ಕ್ಷಣವೇ ಇನ್ನು ತಡ ಮಾಡುವುದು ಬೇಡವೆಂದು, ಕೂಡಲೇ ಗಂಗಾ ಸದಾಶಿವರ ವಿವಾಹ ನೆರವೇರಿಸಿ ಬಿಡುವ ಎಂದು ಯೋಚಿಸಿದರು.ಗಂಗಾ ಸದಾಶಿವನಲ್ಲಿ ಇಷ್ಟು ದಿನ ಎಲ್ಲಿದ್ದೆ !ಸ್ನೇಹಿತರ ಜೊತೆ ಸೇರಿದರೆ ನನ್ನ ನೆನಪೇ ಆಗುವುದಿಲ್ಲವೋ! ಎಂದು ಪ್ರಶ್ನಿಸಿದಾಗ; ಗೌರಿಯ ಧ್ಯಾನದಲ್ಲಿದ್ದ ಸದಾಶಿವನಿಗೆ ಅದಾವುದು ಹೊಳೆಯಲಿಲ್ಲ ;ಗಂಗಾ ಕೇಳಿದ್ದಕ್ಕೆಲ್ಲಾ ಹಾ! ಹೂ! ಎನ್ನುತ್ತಿದ್ದ.ಸದಾಶಿವನ ಅನ್ಯಮನಸ್ಕತೆಯನ್ನು ಗಮನಿಸಿದ ಗಂಗಾ ಹೊರಗಿನಿಂದ ಬಂದು ಸುಸ್ತಾಗಿದ್ದಾರೆ ,ವಿಶ್ರಾಂತಿ ತೆಗೆದುಕೊಳ್ಳಲಿ ನಾಳೆ ಮಾತನಾಡೋಣವೆಂದು; ನಿಮಗೆ ಚಹಾ ಮಾಡಿ ತರುತ್ತೇನೆಂದು ಹೇಳಿ ಹೊರಟಳು.ಗಂಗಾ ಹೋದ ಬಳಿಕ ಸದಾಶಿವನಿಗೆ ಇನ್ನು ಸುಬ್ರಹ್ಮಣ್ಯ ಸ್ವಾಮಿಯಲ್ಲಿ ಸತ್ಯವನ್ನು ಹೇಳಿ ಬಿಡಬೇಕು, ನನ್ನ ಮನೆತನ, ನನ್ನ ತಂದೆ ತಾಯಿ,ತಮ್ಮ ತಂಗಿಯಂದಿರ, ವಿಚಾರವನ್ನು ತಿಳಿಸಿ ಬಿಡಬೇಕು ಎಂದಂದುಕೊಂಡ.
ಇತ್ತ ಗೌರಿ ಸ್ವಾಮಿಗಳ ಜೊತಗೆ ವಿರಾಗಿಯಾಗಿ ಬಾಳಬೇಕೆಂಬ ದೃಢ ಸಂಕಲ್ಪವನ್ನು ಮಾಡಿಕೊಂಡಳು. ಆಗ ವೃದ್ಧ ಸ್ವಾಮಿಗಳು ಮಗಳೇ ಸನ್ಯಾಸತ್ವ ಎನ್ನುವುದು ಮಾನವ ಜನ್ಮದಲ್ಲಿ ನಾವು ಅನುಭವಿಸುವ ಕಷ್ಟ ಸುಖಗಳಿಗಿಂತ ಮೇಲ್ಸ್ತರದಲ್ಲಿ ಇರುವಂತಹದ್ದು: ಸನ್ಯಾಸಿಯಾದವನಿಗೆ ಹೆಣ್ಣು, ಹೊನ್ನು ,ಮಣ್ಣು, ಕಾಮ, ಕ್ರೋಧ ,ಮದ, ಮತ್ಸರ, ಅಹಂಕಾರ ಗಳಿರುವುದಿಲ್ಲ. ಸನ್ಯಾಸಿಯಾದವನು ಐಹಿಕ ಸುಖ ಭೋಗಗಳಿಗೆ ಆಸೆ ಪಡುವುದಿಲ್ಲ.ಅವರು ನಿರಂತರ ಧ್ಯಾನ, ಲೋಕ ಸಮೃದ್ಧಿಗೆ ಪ್ರಾರ್ಥನೆ, ಒಳ್ಳೆಯತನಕ್ಕೆ ಮಾತ್ರ ಮೀಸಲಾಗಿರುತ್ತಾರೆ.
ಮುಂದುವರಿಯುವುದು
✍🏻 ನಾಗಶ್ರೀ.ಎಸ್. ಭಂಡಾರಿ ಮೂಡಬಿದಿರೆ

Good one
ReplyDelete