ಸದಾಶಿವ - ಸಂಚಿಕೆ - 43

ಸದಾಶಿವ

ಸಂಚಿಕೆ - 43 

      ಸದಾಶಿವ ಗೌರಿಯ ಅನ್ವೇಷಣೆಗಾಗಿ, ತನ್ನೂರು, ಪಕ್ಕದೂರಿನ ಸುತ್ತಲೂ ತಿರುಗಾಡಿದ. ಗೌರಿಯನ್ನು ಮದುವೆ ಮಾಡಿಕೊಟ್ಟ ಊರಿಗೆ ತೆರಳಿದ ;ಆದರೆ ಎಲ್ಲೂ ಗೌರಿಯ ಸುಳಿವಿರಲಿಲ್ಲ. ಗೌರಿ ಕಾಡಿನೊಳಗೆ ಹೊಕ್ಕಿರಬಹುದೆಂಬ ಅನುಮಾನ ಕೂಡ ಸದಾಶಿವನಿಗೆ ಬರಲಿಲ್ಲ; ಏಕೆಂದರೆ
ಚಿಕ್ಕಂದಿನಲ್ಲೊಮ್ಮೆ ಗೌರಿ ಮತ್ತು ಸದಾಶಿವ ಶಾಲೆ ಬಿಟ್ಟ ಮೇಲೆ ತೋಟ ತಿರುಗಾಡಲು ಎಂದು ಹೊರಟಿದ್ದರು. ಆಟವಾಡುತ್ತಾ, ಮಾತನಾಡುತ್ತಾ, ಸಾಗುತ್ತಿದ್ದವರಿಗೆ ಕತ್ತಲದಾದುದೇ ತಿಳಿಯಲಿಲ್ಲ. ಗೌರಿಗೆ ಕತ್ತಲೆಂದರೆ ತುಂಬಾ ಭಯ, ಸದಾಶಿವನ ಕೈಯನ್ನು ಹಿಡಿದುಕೊಂಡು ಕೊಂಡಿದ್ದಳು. ಅವಳ ಕೈ ಭಯದಿಂದ ನಡುಗುತ್ತಿತ್ತು. ಸದಾಶಿವ ಗೌರಿಗೆ ಧೈರ್ಯವನ್ನು ಹೇಳುತ್ತಾ ಅವಳ ಮನೆಯತ್ತ ಕರೆದುಕೊಂಡು ಬಂದಿದ್ದ.ಗೌರಿಯ ಮನೆಗೆ ತೆರಳಲು ಕಾಡು ದಾರಿಯಲ್ಲಿ ಸ್ವಲ್ಪ ನಡೆಯಬೇಕಿತ್ತು.ಅಲ್ಲಿ ಬ್ರಹದಾಕಾರದ ಮರಗಳು ಭೀತಿಯನ್ನುಂಟು ಮಾಡುವಂತೆ ಬೆಳೆದಿದ್ದವು. ಪ್ರಾಣಿಗಳ ವಿಚಿತ್ರ ಕೂಗು ,ನೀರವ ಮೌನ ಆವರಿಸಿತ್ತು.
ಸದಾಶಿವ ಮತ್ತು ಗೌರಿಯ ಹೆಜ್ಜೆ
ಸಪ್ಪಳವೊಂದನ್ನು ಬಿಟ್ಟರೆ; ಸುತ್ತಲೂ ನಿಶ್ಯಬ್ದ ವಾತಾವರಣ, ಆಕಾಶ ಕೂಡ ಅಮಾವಾಸ್ಯೆಯ ಕತ್ತಲಿನಿಂದ ಗಾಢ ಕಪ್ಪಂತೆ ಕಾಣುತ್ತಿತ್ತು.ಗೌರಿ ಎಷ್ಟೊಂದು ವೇಗವಾಗಿ ಹೆಜ್ಜೆ ಹಾಕುತ್ತಿದ್ದಳೆಂದರೆ ಕೈ ಹಿಡಿದಿದ್ದ
ಸದಾಶಿವನನ್ನು ಎಳೆದುಕೊಂಡೇ ಬರುತ್ತಿದ್ದಳು. ಅಷ್ಟರಲ್ಲಿ ಬಾವಲಿಯೊಂದು ಕೀಚಲು ಸ್ವರ ಹೊಮ್ಮಿಸುತ್ತಾ ಗೌರಿಯ ತಲೆಯ ಮೇಲಿನಿಂದ ಹಾರಿ ಹೋಯಿತು.
ಗೌರಿಗೆಷ್ಟು ಗಾಬರಿಯಾಯಿತೆಂದರೆ ಅಮ್ಮ ಎಂದರಚುತ್ತಾ, ಸದಾಶಿವನನ್ನು ಅಪ್ಪಿ ಹಿಡಿದುಕೊಂಡಳು. ಸದಾಶಿವ ಗೌರಿಯ ಬೆನ್ನು ನೇವರಿಸುತ್ತಾ ಸಮಾಧಾನಿಸಿದ. ಮನೆಯವರೆಲ್ಲರೂ ಗಾಬರಿಗೊಂಡಿದ್ದರು; ಗೌರಿ ಇನ್ನೂ ಏಕೆ ಬಂದಿಲ್ಲವೆಂದು,ಸದಾಶಿವ ಗೌರಿಯನ್ನು ಕರೆದುಕೊಂಡು ಬಂದಾಗ ಅವರಿಬ್ಬರನ್ನು ಕಂಡ ಮನೆಯವರಿಗೆ ಹೋದ ಜೀವ ಬಂದಂತಾಯಿತು. ಹೇಳದೆ ಕೇಳದೆ ಹೋಗಿದ್ದಕ್ಕೆ ಸರಿಯಾಗಿ ಬೈದು ಬಿಡಬೇಕೆಂದು ಕೊಂಡವರು ಗೌರಿಯ ಮುಖದಲ್ಲಿದ್ದ ಗಾಬರಿ, ಹೆದರಿಕೆಯನ್ನು ಕಂಡು ಸುಮ್ಮನಾದರು. ಅಷ್ಟರಲ್ಲಿ ಸದಾಶಿವನನ್ನು ಹುಡುಕಿಕೊಂಡು ರಾಮರಾಯರು ಶ್ರೀಪತಿರಾಯರ ಮನೆಗೆ ಬಂದಿದ್ದರು.ಯಾರೋ ಒಬ್ಬರು ಸದಾಶಿವ ಗೌರಿಯನ್ನು ಕರೆದುಕೊಂಡು ಶ್ರೀಪತಿ ರಾಯರ ಮನೆಯತ್ತ ಹೊರಟಿದ್ದನ್ನು ಹೇಳಿದ್ದರು. ಹಾಗಾಗಿ ರಾಯರು ಬಂದಿದ್ದರು. ಅಂದು ಗೌರಿ ಕತ್ತಲೆ ಮತ್ತು ಕಾಡಿನ
ಭೀಭತ್ಸತೆಯಿಂದ ಹೆದರಿಹೋಗಿದ್ದಳು.  ಹೀಗೆ ಭಯಭೀತಳಾದ ಗೌರಿ ಮುಂದೆಂದು ಕತ್ತಲಿಗೆ ಹೊರಹೋಗುವ ಸಾಹಸವನ್ನೇ ಮಾಡಿರಲಿಲ್ಲ .ಹಾಗಾಗಿ ಸದಾಶಿವ ಗೌರಿ ಕಾಡಿನೊಳಕ್ಕೆ ಹೋಗಿರಲಾರಳು ಎಂದೆಣಿಸಿದ್ದ.ಆದರೆ ಅವನಿಗೆ ತಿಳಿದಿರಲಿಲ್ಲ *ನೋವಿನಿಂದಿರುವ ಮನಸ್ಸು ,ಮಾನಸಿಕ ನೆಮ್ಮದಿಯನ್ನು  ಕಳೆದುಕೊಂಡ ಹೃದಯ, ಭಯವನ್ನು ನುಂಗಿ ಬಿಡುತ್ತದೆ ಎಂದು*  ಪಾಪ ಗೌರಿ ತನ್ನನ್ನು ಪ್ರಾಣಿಗಳಾದರೂ ತಿಂದು ಬಿಡಲಿ ಎಂದು ಕಾಡಿಗೆ ಹೋಗಿದ್ದಳು. ಆದರೆ ಅವಳ ಸಾವು ಅಲ್ಲಿಯೂ  ಬರೆದಿರಲಿಲ್ಲ.ಹುಡುಕಿ ಹುಡುಕಿ ಸುಸ್ತಾದ ಸದಾಶಿವ ಬೇರೆ ಕಡೆ ಹುಡುಕತೊಡಗಿದ. ಎಲ್ಲಿಯೂ ಗೌರಿ ಸಿಗಲಿಲ್ಲ. ಅಷ್ಟರಲ್ಲಿ ಅವನಿಗೊಂದು ಆಲೋಚನೆ ಬಂದಿತ್ತು. ಅದು ಅವನಿಗೆ ಸಂತೋಷವನ್ನು ಮತ್ತು ಉತ್ಸಾಹವನ್ನು ನೀಡಿತು. ಒಂದು  ಗೌರಿ ಆತ್ಮಹತ್ಯೆ ಏನಾದರೂ ಮಾಡಿಕೊಂಡಿದ್ದರೆ ಅವಳ ಹೆಣವಾದರೂ ಸಿಗುತ್ತಿತ್ತು ;ಆದರೆ ಅದಾವುದರ ಸುಳಿವು ಇಲ್ಲ ,ಹಾಗಾಗಿ ಗೌರಿ ಇನ್ನೂ ಬದುಕಿದ್ದಾಳೆ ಎನ್ನುವುದು  ಸಂತಸ ತಂದ ವಿಚಾರ, ಸದಾಶಿವನ ಉತ್ಸಾಹವನ್ನು ಹೆಚ್ಚಿಸಿದ ಇನ್ನೊಂದು ವಿಚಾರವೆಂದರೆ..

 ಮುಂದುವರಿಯುವುದು

✍🏻 ನಾಗಶ್ರೀ ಎಸ್ ಭಂಡಾರಿ ಮೂಡುಬಿದಿರೆ

Comments

Popular posts from this blog

ಹೆಮ್ಮೆಯ ಭಂಡಾರಿ ಪ್ರತಿಭೆ : 4 - ಸಂದೀಪ್ ಭಂಡಾರಿ

ಸದಾಶಿವ. ಸಂಚಿಕೆ - 2

ಸದಾಶಿವ - ಸಂಚಿಕೆ-32