ಸದಾಶಿವ - ಸಂಚಿಕೆ - 42
ಸದಾಶಿವ
ಸಂಚಿಕೆ 42
ಗೌರಿ ತಾನು ಸದಾಶಿನನ್ನು ಪ್ರೇಮಿಸಿದ ವಿಷಯವೊಂದನ್ನು ಬಿಟ್ಟು ,ಗಂಡನ ಮನೆಯವರ ಹಿಂಸೆಯನ್ನು,ತಾನು ಪಟ್ಟ ಕಷ್ಟಗಳನ್ನು ಸವಿವರಾಗಿ ಹೇಳಿ ,ಮತ್ತೆಂದು ಆ ಮನೆಯ ಕಡೆ ಹಿಂದಿರುಗುವುದಿಲ್ಲವೆಂದು ;ತಾಯಿ ಮನೆಗೆ ಹೋಗಿ ಅವರ ಹೆಸರಿಗೆ ಮಸಿ ಬಳಿಯುವುದಿಲ್ಲವೆಂದು ಹೇಳಿ ಜೋರಾಗಿ ಅತ್ತಳು. ಮನಸ್ಸು ಹಗುರ ಮಾಡಿಕೊಳ್ಳಲಿ ಎಂದು ಸ್ವಾಮಿಗಳು ಸುಮ್ಮನಿದ್ದರು.ಅತ್ತು ಸಮಾಧಾನಗೊಂಡ ಗೌರಿಯನ್ನು ವಿಶ್ರಾಂತಿ ತೆಗೆದುಕೊಳ್ಳಲು ಹೇಳಿ ಧ್ಯಾನಾಸಕ್ತರಾದರು. ಅವರ ಚಿತ್ತದಲ್ಲಿ ಗೌರಿಗೆ ಯಾವ ರೀತಿಯಲ್ಲಿ ಉಪಕಾರ ಮಾಡಲಿ ಎಂಬ ದ್ವಂದ್ವವೇ ಕಾಡುತ್ತಿತ್ತು .ಇತ್ತ ಮನೆಗೆ ಬಂದ ಸದಾಶಿವನಿಗೆ ಅಜ್ಜಿ ಆಸ್ಪತ್ರೆಯಲ್ಲಿರುವ ವಿಷಯ ತಿಳಿದು ಗಾಬರಿಯಾಯಿತು; ಆದರೂ ಅಜ್ಜಿಗೇನೂ ಆಗದು ಎಂದು ಮನಸ್ಸಮಾಧಾನ ಮಾಡಿಕೊಂಡು, ಗೌರಿಯ ಮನೆಯ ಕಡೆ ಹೋಗಿ ಬರುತ್ತೇನೆಂದು ತಾಯಿಯ ಬಳಿ ಹೇಳಿದಾಗ ;ಸರಸಿ ಗೌರಿಗೆ ಮದುವೆಯಾದ ವಿಚಾರವನ್ನು ,ನಿನ್ನನ್ನು ಹುಡುಕಿಕೊಂಡು ಮಡಿಕೇರಿಗೆ ಬಂದಿದ್ದನ್ನು, ಗಂಡನ ಮನೆಯವರ ದಬ್ಬಾಳಿಕೆಯಿಂದ ಮನನೊಂದ ಗೌರಿ ಮನೆ ಬಿಟ್ಟು ಹೋದ ವಿಚಾರವನ್ನು ಹೇಳಿದಾಗ; ಸದಾಶಿವ ಹುಚ್ಚನಾಗಿ ಬಿಟ್ಟ.ನಾನು ಪ್ರೀತಿಸಿದ ಗೌರಿ ಎಷ್ಟೆಲ್ಲಾ ಕಷ್ಟಗಳನ್ನು
ಅನುಭವಿಸುವಂತಾಯಿತು.ನನ್ನ ದುಡುಕು ನಿರ್ಧಾರದಿಂದ ಮನೆ ಬಿಟ್ಟು ಹೋಗಿ ತಪ್ಪು ಮಾಡಿದೆನೇ? ಗೌರಿ ಮಡಿಕೇರಿಯಲ್ಲಿ ಇದ್ದಾಗ ನನ್ನವರಾರೋ ಇಲ್ಲಿದ್ದಾರೆ ಎಂದು ಮನಸ್ಸಿಗಾದ ಕಸಿವಿಸಿ ನಿಜವೇ! ಅಯ್ಯೋ ವಿಧಿಯೇ! ನೀನೇಕೆ ಇಷ್ಟೊಂದು ಕ್ರೂರಿಯಾಗಿಬಿಟ್ಟೆ! ಪ್ರಾಣಕ್ಕಿಂತ ಮಿಗಿಲಾಗಿ ಪ್ರೀತಿಸುತ್ತಿದ್ದ
ಗೌರಿಯನ್ನೇಕೆ ನನ್ನಿಂದ ದೂರ ಮಾಡಿದೆ;ನನ್ನ ಹೃದಯವೆಂಬ ಗುಡಿಯಲ್ಲಿ ಗೌರಿಗಿರುವ ಸ್ಥಾನ ಬೇರಾರಿಗೂ ಇಲ್ಲವೆಂದು, ನೀನು ಅರಿಯದಾದೆಯಾ? ನಿನ್ನ ಅನವರತ ಪೂಜಿಸುತ್ತಿದ್ದ ಗೌರಿಗೆ ಇಷ್ಟೊಂದು ಕಷ್ಏಕೆ ನೀಡಿದೆ? ಹೋಗಲಿ ನನ್ನಿಂದ ದೂರ ಮಾಡಿದ ಗೌರಿಯ ವೈವಾಹಿಕ
ಜೀವನವನ್ನೇಕೆ ಕತ್ತಲ ಮಾಯವಾಗಿಸಿದೆ! ವಿವಾಹವಾದ ಮೇಲಾದರೂ ಅವಳಿಗೆ ಸುಖ ,ಸಂತೋಷ, ನೆಮ್ಮದಿಯನ್ನು ನೀಡಬಹುದಿತ್ತಲ್ಲವೇ? ನನ್ನ ಅಗಲುವಿಕೆಯಿಂದ; ವಿವಾಹ ಜೀವನದ ಕಷ್ಟಗಳಿಂದ, ಸುಕೋಮಲ ಮನದ ನನ್ನ ಗೌರಿ ಎಷ್ಟು ಜರ್ಜರಿತಳಾಗಿರುವಳೋ ಎಂದು ರೋಧಿಸತೊಡಗಿದ. ಅಷ್ಟರಲ್ಲಿ ಮನಸ್ಸಿಗೇನೋ ತೋಚಿತು! ಇಲ್ಲಾ ಇಲ್ಲಾ ಈಗ ಅಳುತ್ತಾ ಕುಳಿತುಕೊಳ್ಳುವ ಸಮಯವಲ್ಲ ,ಗೌರಿಯ ಜೀವನವನ್ನು ನಾನು ಸರಿ ಮಾಡಬೇಕು; ಅವಳ ಜೀವನಕ್ಕೊಂದು ನೆಲೆ, ಅವಳ ಬಾಳಿಗೊಂದು ಆಸರೆ ನೀಡಬೇಕು, ನನ್ನ ಹೃದಯದರಸಿ ನಲುಗಿದ ಹೂವಾಗಬಾರದು; ದೇವರಿಗೆ ಅರ್ಪಿತವಾಗುವ ಪುಷ್ಪವಾಗಬೇಕು, ನಿಂತ ನೀರಾಗಬಾರದು , ಹರಿಯುವ ತೊರೆ ಯಾಗಬೇಕು. ನಮ್ಮ ಮನೆಯ ಲಕ್ಷ್ಮಿ ಯಾಗಬೇಕು. ಎಂದಂದುಕೊಂಡು ಗೌರಿಯ ಹುಡುಕಾಟಕ್ಕೆ ಹೊರಡಲು ನಿಶ್ಚಯಿಸಿದ. ಆದರೆ ಈ ಬಾರಿ ಹೇಳದೆ ಕೇಳದೆ ಮನೆ ಬಿಟ್ಟು ಹೋಗಲಿಲ್ಲ, ಮನೆಯವರಲ್ಲಿ ತನಗಿರುವ ಪ್ರೇಮವನ್ನು, ಅವಳನ್ನು ಹುಡುಕಿಕೊಂಡು ಬರುತ್ತೇನೆಂದು ಹೇಳಿ ಹೊರಟೇ ಬಿಟ್ಟ. ರಾಯರು ಮತ್ತು ಸರಸಿಗೆ ಸದಾಶಿವ ಗೌರಿಯನ್ನು ಪ್ರೀತಿಸುತ್ತಿರುವ ವಿಷಯವನ್ನು ಕೇಳಿ ದಿಗ್ಭ್ರಮೆಯಾಯಿತು. ಆದರೆ ವಿಶಾಲ ಮನಸ್ಸಿನ ಅವರು ಸದಾಶಿವನ ಪ್ರೇಮಕ್ಕೆ ಅಡ್ಡಿಯುಂಟು ಮಾಡಲು ಇಚ್ಛಿಸಲಿಲ್ಲ .ಮುಗ್ಧೆ ಗೌರಿಯ ಮೇಲೆ ಅವರಿಗೆ ಪ್ರೀತಿ ಕೂಡ ;ಸರಿ ಹೋಗಿ ಬಾರೆಂದು ಹೇಳಲು ಕೂಡ ಅವನಲ್ಲಿ ಇರಲಿಲ್ಲ,ಅವನಾಗಲೇ ಗೌರಿಯ ಹುಡುಕಾಟಕ್ಕೆ ಹೊರಟೆ ಬಿಟ್ಟಿದ್ದ ಗೌರಿ ಸದಾಶಿವನಿಗೆ ಸಿಗುವಳೋ ಕಾಯುತ್ತಿರುವ ಗಂಗಾಳಿಗೆ ಸಿಗುವನೋ ದೇವರೇ ಬಲ್ಲ!
ಮುಂದುವರಿಯುವುದು
✍🏻
ನಾಗಶ್ರೀ.ಎಸ್.ಭಂಡಾರಿ
ಮೂಡಬಿದಿರೆ

Comments
Post a Comment