ಸದಾಶಿವ - ಸಂಚಿಕೆ -38

ಸದಾಶಿವ


ಸಂಚಿಕೆ -38

ಸವೆದ ದಾರಿ ಎಷ್ಟೆಂದು ತಿಳಿಯಲಿಲ್ಲ,ಕಾಡಿಗೆ ಬಂದು ಬಿಟ್ಟಿದ್ದಳು; ಪ್ರಾಣಿಗಳಾದರೂ ನನ್ನನ್ನು ತಿಂದು ಬಿಡಲಿ ಎಂಬ ಭಾವ ಅವಳಲ್ಲಿತ್ತು, ನಿರ್ಭಾವುಕತೆಯಿಂದ ದಾರಿ ಸವೆಸುತ್ತಿದ್ದಳು. ಆ ಅರಣ್ಯದೊಳಗೆ ಸಾಲು ಸಾಲು ಎತ್ತರದ ಮರಗಳಿದ್ದವು, ಪ್ರಾಣಿಗಳ ಕೂಗು, ಪಕ್ಷಿಗಳ ಕಲರವ, ಜೀರುಂಡೆಯ ಗುಯ್ಗುಡುವಿಕೆ, ಗೂಬೆಗಳ ಕರ್ಕಶ ಕೂಗು, ನರಿ ತೋಳಗಳ ಊಳಿಡುವಿಕೆ, ಒಟ್ಟಾರೆಯಾಗಿ ಭಯದ ವಾತಾವರಣವನ್ನು ಸೃಷ್ಟಿಸಿತ್ತು.ಆದರೆ  ಅದಾವುದು ಗೌರಿಯಲ್ಲಿ ಭಯವನ್ನುಂಟು ಮಾಡಲಿಲ್ಲ.ಸಾಯಲು ಹೊರಟವಳಿಗೆ
ಕಾಡಾದರೇನು, ನಾಡದರೇನು ,ಎಂಬ ಭಾವ ಅವಳಲ್ಲಿತ್ತು. ನಡೆಯುತ್ತಿದ್ದ ದಾರಿ ಕಲ್ಲು, ಮುಳ್ಳುಗಳಿಂದ ತುಂಬಿತ್ತು .ಅದನ್ನವಳು ಲೆಕ್ಕಿಸಲೇ ಇಲ್ಲ.ಹೀಗೆ ನಡೆಯುತ್ತಾ ನಡೆಯುತ್ತಾ ಸುಸ್ತಾದ ಗೌರಿ ಹಸಿವು ಮತ್ತು ಬಾಯಾರಿಕೆಯಿಂದ ತಲೆ ತಿರುಗಿ ಬಿದ್ದಳು.ಆದರೆ ಅಲ್ಲಾರೂ ಉಪಚರಿಸುವವರು ಇರಲಿಲ್ಲ.ಇತ್ತ ಗೌರಿಯ ಮನೆಯವರಿಗೆ ಮಗಳು ಮನೆ ಬಿಟ್ಟು ಹೋದ ವಿಚಾರ ತಿಳಿಯಿತು. ಅಕ್ಕಪಕ್ಕದ ಮನೆಯವರಿಂದ ಗೌರಿಗೆ ಕುಮಾರನ ಮನೆಯವರು ಕೊಡುತ್ತಿದ್ದ ಕಷ್ಟದ ಬಗ್ಗೆಯೂ ತಿಳಿಯಿತು. ತಮ್ಮ ಅವಸರದ ನಿರ್ಧಾರದಿಂದ ಗೌರಿಯ ಬಾಳು ಹಾಳಾಯಿತು ಎಂದು ಮನೆಯವರು ನೊಂದುಕೊಂಡರು. ಮೊದಲೇ ದೊಡ್ಡ ಮನೆಯವರು ,ಗೌರಿಯ ತಂದೆ ತಾಯಿ ಕೋಪದಿಂದ ಕುಮಾರನನ್ನು ಥಳಿಸಿ; ಅವನ ತಂದೆ ತಾಯಿಗೆ ತಮ್ಮ ಜನಗಳಿಂದ ಹೊಡೆಸಿದರು,ಅಷ್ಟಕ್ಕೂ ಬಿಡದೆ ಪೊಲೀಸರಿಗೆ ಒಪ್ಪಿಸಿದರು. ವರದಕ್ಷಿಣೆ, ಮತ್ತು ದೈಹಿಕ ಹಿಂಸೆ ಕೊಲೆ ಯತ್ನ ಎಂದು ಕೇಸನ್ನು ಹಾಕಿ ಜೈಲಿಗಟ್ಟಿದರು.ಕುಮಾರ ಮತ್ತು ಅವನ ತಂದೆ ತಾಯಿಗೆ ಹತ್ತು ವರ್ಷಗಳ ಕಠಿಣ ಕಾರಾಗ್ರಹ ಶಿಕ್ಷೆಯಾಯಿತು.
   ಇತ್ತ ರಾಮ ರಾಯರಿಗೆ ಗೌರಿಗಾದ ಅನ್ಯಾಯದ ವಿಚಾರ ತಿಳಿಯಿತು, ನೊಂದಿದ್ದ ಶ್ರೀಪತಿ ರಾಯರನ್ನು ಸಮಾಧಾನಿಸಿ; ಮೊಮ್ಮಗಳನ್ನು ಹುಡುಕಲು ಶ್ರೀಪತಿ ರಾಯರಿಗೆ ತಾವು ಸಹಾಯವನ್ನು ನೀಡಿದರು.ಆದರೆ ಗೌರಿಯ ಸುಳಿವೇ ಸಿಗಲಿಲ್ಲ,ಸದಾಶಿವ ಮತ್ತು ವಿಜಯನಿಂದ ದೂರವಾಗಿ ನೊಂದಿದ್ದ ರಾಯರಿಗೆ ಮತ್ತೊಂದು ಆಘಾತ ಕಾದಿತ್ತು.
ರಾಯರ ಕುಟುಂಬಕ್ಕೆ ಕಷ್ಟಗಳ ಸರಮಾಲೆ ಒಂದರ ಮೇಲೊಂದರಂತೆ ಬಂದೊದಗತೊಡಗಿತು. ರಾಯರ ತಾಯಿ ಮುತ್ತುಲಕ್ಷ್ಮಿಗೆ ಹೃದಯಾಘಾತವಾಗಿ ಆಸ್ಪತ್ರೆಯಲ್ಲಿ ತೀವ್ರನಿಗಾ ಘಟಕದಲ್ಲಿ ಇರಿಸಿದ್ದರು, ಕಾಕತಾಳಿಯವೋ ಎನ್ನುವಂತೆ ಹಾವು ಕಚ್ಚಿ
ಚೇತರಿಸಿಕೊಂಡಿದ್ದ ಸದಾಶಿವನಿಗೆ ತಾಯಿ ಮತ್ತು ಗೌರಿಯ ನೆನಪು ಬಹುವಾಗಿ ಕಾಡಿತ್ತು. ಸುಬ್ರಹ್ಮಣ್ಯ ಸ್ವಾಮಿಯಲ್ಲಿ ಒಂದೆರಡು ವಾರ ಸ್ನೇಹಿತನ ಊರಿಗೆ ಹೋಗಿ ಬರುತ್ತೇನೆಂದು ಹೇಳಿ ಕೆಲವೊಂದಷ್ಟು ಬಟ್ಟೆಗಳನ್ನು ಬ್ಯಾಗಿಗೆ ತುರುಕಿಕೊಂಡು ಹೊರಟು ನಿಂತ. ಗಂಗಾಳಿಗೆ ಹೃದಯವೇ ತನ್ನಿಂದ ದೂರವಾಗುತ್ತಿದೆ ಎನ್ನುವಂತಹ ನೋವು ಕಾಡಿತ್ತು.ತಂದೆಯ ಬಳಿ ಸದಾಶಿವನನ್ನು ಕಳುಹಿಸಬೇಡಿ ಎಂದು ಬೇಡಿಕೊಳ್ಳುವ ಮನಸ್ಸಾದರೂ ;ತಂದೆ ಏನನ್ನುವರೋ ಎಂಬ ನಾಚಿಕೆಯಿಂದ ಸುಮ್ಮನಿದ್ದಳು .ಬ್ಯಾಗನ್ನು ಹಿಡಿದು ಹೊರಟು ನಿಂತಿದ್ದ ಸದಾಶಿವನಿಗೆ ತಾನೇ ಮಾಡಿದ ಅಡುಗೆಯನ್ನು ಬುತ್ತಿಯಲ್ಲಿ ಕಟ್ಟಿ ಕೊಟ್ಟು, ನೀರಿನ ಬಾಟಲಿಯನ್ನು ನೀಡಿದಳು.ಹಾಗೆ ಬೇಗನೇ ಬಂದು ಬಿಡಿ ಎಂದು ಹೇಳಲು ಮರೆಯಲಿಲ್ಲ..

 ಮುಂದುವರೆಯುವುದು

✍🏻 ನಾಗಶ್ರೀ ಎಸ್ ಭಂಡಾರಿ ಮೂಡಬಿದಿರೆ

Comments

Popular posts from this blog

ಹೆಮ್ಮೆಯ ಭಂಡಾರಿ ಪ್ರತಿಭೆ : 4 - ಸಂದೀಪ್ ಭಂಡಾರಿ

ಸದಾಶಿವ. ಸಂಚಿಕೆ - 2

ಸದಾಶಿವ - ಸಂಚಿಕೆ-32