ಸದಾಶಿವ - ಸಂಚಿಕೆ - 36

ಸದಾಶಿವ


ಸಂಚಿಕೆ - 36

  ತೋಟಕ್ಕೆ ನೀರು ಬಿಡಲೆಂದು ಬೆಳಿಗ್ಗೆ ಬೇಗನೆ ಎದ್ದು ಬಂದಿದ್ದ.ತೆಂಗಿನಮರದ ಸುತ್ತಲೂ ಇದ್ದ ಕಳೆಗಳನ್ನು ಕಿತ್ತು ಸ್ವಚ್ಚಗೊಳಿಸುತ್ತಿದ್ದ.
ಗಂಗಾ ಸದಾಶಿವನ ಹಿಂಬದಿಯಿಂದ ಬಂದು ನಿಂತು, ಅವನ ಕೆಲಸವನ್ನು ಗಮನಿಸುತ್ತಿದ್ದಳು. ದೇವರಲ್ಲಿ ವಿನೀತನಾಗಿ ಬೇಡುವ ಭಕ್ತನಂತೆ, ನಿಶಬ್ಧವಾಗಿ ಹರಿಯುವ ನದಿಯಂತೆ, ದೇವಾಲಯದ ಒಳಗಿನ ಮೌನದಂತೆ ,ಬೇರೆ ಯಾವುದರ ಕಡೆಯೂ ಗಮನವನ್ನು ಹರಿಸದೆ ಕೆಲಸದ ಮೇಲೆ ಅತೀವ ಶ್ರದ್ಧೆಯಿಂದ ಕಾರ್ಯ ನಿರ್ವಹಿಸುತ್ತಿದ್ದ .
ಸುತ್ತಲೂ ಏನಾಗುತ್ತಿದೆ ಎನ್ನುವುದರ ಪರಿವೆ ಇಲ್ಲದೆ ಕಳೆ ಕೀಳುತ್ತಿದ್ದ. ಅವನ ಕೆಲಸದ ಮೇಲಿನ ಮಗ್ನತೆಯನ್ನು ಕಂಡ ಗಂಗಾ, ಮನಸ್ಸಿನಲ್ಲಿ ಸದಾಶಿವನಿಗೆ ಕೆಲಸದ ಮೇಲೆ ಅದೆಷ್ಟೊಂದು ಶೃಧ್ಧೆ ಎಂದುಕೊಂಡಳು. ಅಷ್ಟರಲ್ಲಿ ದೊಡ್ಡದಾದ ನಾಗರಹಾವೊಂದು ಸದಾಶಿವನ ಬಳಿ ಬಂದು ಹೆಡೆ ಎತ್ತಿ ನಿಂತಿತ್ತು.

ಸದಾಶಿವನನ್ನು ಗಮನಿಸುವುದರಲ್ಲಿ ನಿರತಳಾಗಿದ್ದ  ಗಂಗಾಳಿಗೆ ಹಾವು ಬಂದದ್ದು ತಿಳಿಯಲೇ ಇಲ್ಲ; ಹಾವನ್ನು ಕಂಡು ಬೆದರಿದ ಗಂಗಾ ,'ಸದಾಶಿವ' ಹಾವು; ಎಂದರಚಿದಳು. ಗಂಗಾ ಕೂಗಿದ್ದನ್ನು ಕೇಳಿಸಿಕೊಂಡ ಸದಾಶಿವ ಹಿಂದಿರುಗುವಷ್ಟರಲ್ಲಿ; ಹಾವು ಸದಾಶಿವನ ಕಾಲಿಗೆ ಕಚ್ಚಿತ್ತು;ಸದಾಶಿವ ಹಾವು ಕಚ್ಚಿದಾಗ ಅಮ್ಮ ಎಂದರಚಿದ, ಹಾಗೆಯೇ ಹಾವಿನ ಕತ್ತನ್ನು ಹಿಡಿದು; ಸರಸರನೆ ತಿರುಗಿಸಿ ದೂರ ಎಸೆದ. ಅಷ್ಟರಲ್ಲಿ ವಿಷ ಏರುತ್ತಾ ಬಂದಿತ್ತು. ಗಂಗಾಳಿಗೆ ಗಾಬರಿಯಲ್ಲಿ ಏನು ಮಾಡಬೇಕೆಂದೇ ತೋಚಲಿಲ್ಲ.ಹಾವು ಕಚ್ಚುವುದಕ್ಕೆ ಪ್ರಥಮ ಚಿಕಿತ್ಸೆ ಏನು ಮಾಡಬೇಕೆಂದು ಕೂಡ ತಿಳಿದಿರಲಿಲ್ಲ. ಕೂಡಲೇ ಓಡಿ ತಂದೆಯನ್ನು ಕರೆದುಕೊಂಡು ಬಂದಳು. ಸುಬ್ರಹ್ಮಣ್ಯ ಸ್ವಾಮಿ ಅಲ್ಲಿಗೆ ಬರುವಷ್ಟರಲ್ಲಿ ವಿಷ ಮೈ ಪೂರ್ತಿ ಸೇರಿತ್ತು. ಕೂಡಲೇ ಪ್ರಥಮ ಚಿಕಿತ್ಸೆಯನ್ನು ಮಾಡಿದಳು. ಆದರೂ ಸದಾಶಿವನಿಗೆ ಪ್ರಜ್ಞೆ ಬಂದಿರಲಿಲ್ಲ.ಆಸ್ಪತ್ರೆಗೆ ಕರೆದುಕೊಂಡು ಹೋಗುವುದೇ ಒಳಿತೆಂದು; ಕೆಲಸದಾಳುಗಳ ಸಹಾಯದಿಂದ
ಸದಾಶಿವನನ್ನು ಎತ್ತಿಕೊಂಡು ಆಸ್ಪತ್ರೆಗೆ ಹೋದರು. ಅಲ್ಲಿನ ವೈದ್ಯ ಸದಾಶಿವ ಉಳಿಯುವುದು  ಅಸಾಧ್ಯ ವಿಷ ಮೈಪೂರ್ತಿ ಏರಿದೆ ಎಂದರು, ಗಂಗಾಳಿಗೆ ಆ ಮಾತನ್ನು ಕೇಳಿ ಅಳುವೇ ಬಂದುಬಿಟ್ಟಿತ್ತು.

   ಇತ್ತ ಗೌರಿ ಗಂಡನ ಮನೆಗೆ ಬಂದಿದ್ದಳು,ಮನದಲ್ಲಿ ಸದಾಶಿವನನ್ನು ಪ್ರೀತಿಸುತ್ತಿದ್ದರೂ, ಮದುವೆಯಾದ ನಂತರ ತನ್ನ ಮನಸ್ಸನ್ನು ಬದಲಾಯಿಸಲು ಪ್ರಯತ್ನಿಸುತ್ತಿದ್ದಳು, ಕುಮಾರನನ್ನು ಪ್ರೀತಿಸಲು ಪ್ರಯತ್ನಪಡುತ್ತಿದ್ದಳು. ಕುಮಾರನಿಗೆ ಗೌರಿಯ ಅಂದದ ಮೇಲೆ ಆಸೆ ಇತ್ತೇ ಹೊರತು,ಅವಳ ಮೇಲಲ್ಲ ;ಅವನ ಮನದಲ್ಲಿ ಪ್ರೀತಿ ,ಪ್ರೇಮ, ಕರುಣೆ ,ವಾತ್ಸಲ್ಯಕ್ಕೆ ಜಾಗವೇ ಇರಲಿಲ್ಲ.ತಾನು ಹೇಳಿದ್ದನ್ನೇ ಮಾಡಬೇಕೆಂದು ತಾಕೀತು ಮಾಡುತ್ತಿದ್ದ.ಗೌರಿಯ ಇಷ್ಟಕ್ಕೆ ಬೆಲೆಯೇ ಇರಲಿಲ್ಲ. ಗೌರಿಯನ್ನು  ಹೀನಾಯವಾಗಿ ನಡೆಸಿಕೊಳ್ಳುತ್ತಿದ್ದ. ಹೋಗಲಿ ಅತ್ತೆ
ಮಾವನಾದರೂ ತನ್ನಲ್ಲಿ ಪ್ರೀತಿ ಇಟ್ಟುಕೊಳ್ಳಲಿ ಎಂದುಕೊಂಡು ಅವರಂದ  ಕೆಲಸಗಳನ್ನು ಮಾಡಿ ,ಅವರಿಷ್ಟಪಟ್ಟ ಅಡುಗೆಗಳನ್ನು ಮಾಡಿ, ಬಡಿಸಿ ಅವರನ್ನು ಖುಷಿ ಪಡಿಸಲು ಪ್ರಯತ್ನ ಪಡುತ್ತಿದ್ದಳು. ಆದರೆ ಅವರು ಕೂಡ ಗೌರಿಯನ್ನು ಗಾಣದೆತ್ತಿನಂತೆ  ದುಡಿಸುತ್ತಿದ್ದರೆ ಹೊರತು, ಸ್ವಲ್ಪ ಮಾತ್ರದ ಪ್ರೀತಿಯನ್ನು ಕೊಡುತ್ತಿರಲಿಲ್ಲ ,ಅವರಿಗೆ ಗೌರಿಯ ಮನೆಯವರ ಆಸ್ತಿ ಬೇಕಿತ್ತೇ  ಹೊರತು ಗೌರಿಯಲ್ಲ; ಕುಮಾರನ ಮನೆಯವರ ದಬ್ಬಾಳಿಕೆಯಿಂದ ದಂತದ ಬೊಂಬೆಯಂತಿದ್ದ ಗೌರಿ ಒಣಕಲು ಕಡ್ಡಿಯಾದಳು. ಅತ್ತ ಸದಾಶಿವ ಸಾವು ಬದುಕಿನ ನಡುವೆ ಹೋರಾಡುತ್ತಿದ್ದರೆ ಇತ್ತ ಗೌರಿ ಸಾವನ್ನೇ ಬಯಸುತ್ತಿದ್ದಳು..

 ಮುಂದುವರಿಯುವುದು

✍🏻 ನಾಗಶ್ರೀ ಎಸ್ ಭಂಡಾರಿ ಮೂಡುಬಿದಿರೆ

Comments

Popular posts from this blog

ಹೆಮ್ಮೆಯ ಭಂಡಾರಿ ಪ್ರತಿಭೆ : 4 - ಸಂದೀಪ್ ಭಂಡಾರಿ

ಸದಾಶಿವ. ಸಂಚಿಕೆ - 2

ಸದಾಶಿವ - ಸಂಚಿಕೆ-32