ಸದಾಶಿವ - ಸಂಚಿಕೆ - 33

ಸದಾಶಿವ

ಸಂಚಿಕೆ - 33

    ಅವಳ ಅಳಲನ್ನು ಕೇಳಲು,ದೇವರನ್ನು ಬಿಟ್ಟರೆ ಮತ್ತಾರೂ ಬರಲೇ ಇಲ್ಲ, ಒಂದೆರಡು ಗಂಟೆಗಳು ಕಾದಳು, ಅಷ್ಟರಲ್ಲಿ ಬಸ್ಸು ಬರುವ ಸಮಯವೂ ಬಂದಿತ್ತು, ದೇವರನ್ನು ದೀನಳಂತೆ ನೋಡಿ ,ಹೊರಟು ನಿಂತಳು. ಅಷ್ಟರಲ್ಲಾಗಲೇ ಬಸ್ಸು ಬಂದು ನಿಂತಿತು. ಹಿಂದಿರುಗಿಸಿ ನೋಡುತ್ತಲೇ ಬಸ್ಸಿನ ಒಳ ಹೊಕ್ಕ ಗೌರಿಯ ಮನಸ್ಸಿನ ತುಂಬಾ ಸದಾಶಿವನದೇ
ಧ್ಯಾನವಾಗಿತ್ತು.ಗೌರಿ ಬಸ್ಸನ್ನೇರಿ  ಕುಳಿತುಕೊಳ್ಳುವುದಕ್ಕೂ, ಸದಾಶಿವ ದೇವಸ್ಥಾನದ ಬಳಿ ಬರುವುದಕ್ಕೂ ಕೆಲವೇ ನಿಮಿಷಗಳ ಅಂತರವಿತ್ತು. ಅಷ್ಟರಲ್ಲಾಗಲೇ ಬಸ್ಸು ಹೊರಟಿತು. ಈರ್ವರು ಒಬ್ಬರನ್ನೊಬ್ಬರು ಸಂಧಿಸಲೇ ಇಲ್ಲ.ಕೆಲವೊಮ್ಮೆ ಕಣ್ಣಿಗೆ ಕಂಡಂತೆ ಅನ್ನಿಸಿದರೂ ಕಾಣದೆ ದೂರವಾಗುತ್ತಾರೆ ,ಹಾಗೆ ಗೌರಿಗೆ ಸದಾಶಿವ ಹತ್ತಿರದಲ್ಲೇ ಇದ್ದಾನೆ, ಎಂದು ಅನಿಸಿದರೂ ಕಣ್ಣ ಮುಂದೆ ಕಾಣಿಸುತ್ತಿರಲಿಲ್ಲ, ಇತ್ತ ಸದಾಶಿವ ತನ್ನ ತಾಯಿಯ ಹೆಸರಿನಲ್ಲಿ ಅರ್ಚನೆ ಮಾಡಿಸಲೆಂದು ಬಂದಿದ್ದ. ಗೌರಿ ಸದಾಶಿವನನ್ನು ಕಾಣದೆ ,ಭೇಟಿ ಮಾಡದೇ, ಮಾತನಾಡದೆ, ಖಿನ್ನಳಾಗಿ ಹೋದಳು. ಅತ್ತ ಅವಳ ಮನೆಯವರು ಮದುವೆಯ ಸಿದ್ಧತೆಯನ್ನು ತರಾತುರಿಯಿಂದ ಮಾಡುತ್ತಿದ್ದರು.ಗೌರಿಯ ಬರುವನ್ನೇ ಎಲ್ಲರೂ ಕಾಯುತ್ತಿದ್ದರು. ಮಡಿಕೇರಿಯಿಂದ ನೇರವಾಗಿ ತನ್ನೂರಿಗೆ ಬಂದಿಳಿದ ಗೌರಿ, ಎಲ್ಲವನ್ನೂ ಕಳೆದುಕೊಂಡ ವಿರಾಗಿಯಂತೆ ಕಾಣುತ್ತಿದ್ದಳು. ಪ್ರೀತಿ ಎಂಬ ಮಾಯೆಯಲ್ಲಿ ಸದಾಶಿವನನ್ನು ದೇವರಂತೆ, ಮನವೆಂಬ ಗುಡಿಯಲ್ಲಿ ಪೂಜಿಸುತ್ತಿದ್ದ ಗೌರಿ ಇನ್ನಾರೋ ಕಟ್ಟುವ ತಾಳಿಗೆ ಕೊರಳೊಡ್ಡುವ ಪರಿಸ್ಥಿತಿ ಬಂದೊದಗಿತ್ತು. ಮನೆಯೊಳಗೆ ಬಂದ ಗೌರಿಯನ್ನು ಮನೆಯವರೆಲ್ಲರೂ ಪ್ರೀತಿಯಿಂದ ಬರಮಾಡಿಕೊಂಡರು. ಬೆಂಗಳೂರಿಗೆ ಹೊರಟಾಗ  ಅರಳಿದ ತಾವರೆಯಂತಿದ್ದ ಗೌರಿಯ ಮುಖ ಹಿಂತಿರುಗಿದಾಗ ಮುದುಡಿದ ತಾವರೆಯಂತೆ ಬಾಡಿತ್ತು.  ಸೌಂದರ್ಯದ ಖನಿಯಂತಿದ್ದವಳು,ನಿಸ್ತೇಜ ಮುಖದವಳಂತೆ  ಕಾಣುತ್ತಿದ್ದಳು. *ಬಯಸಿದ್ದೆಲ್ಲಾ ಸಿಗುವಂತಿದ್ದರೆ* *ಎಲ್ಲರೂ ಸುಖಿಗಳು ಸಿಕ್ಕಿದ್ದರಲ್ಲಿ ಸಂತಸ* *ಪಡೋಣ ಎಂದುಕೊಂಡರೆ* *ದೊರಕಿದ್ದು ಕೂಡ ನೋವು ನೀಡುವಂತಿದ್ದರೆ ದೇವರನ್ನು ಶಪಿಸದೇ ಏನು ಮಾಡಲು*
*ಸಾಧ್ಯ*  ಆದರೆ ಅನಂತವಾದ ವಿಶ್ವದಲ್ಲಿ ಸಾಧ್ಯವಾಗುವ ಯಾವುದನ್ನಾದರೂ ಸಾಧಿಸಲು ಆ ದೇವರ ಆಜ್ಞೆ ಇರುತ್ತದೆಯಂತೆ, ಆ ಕಾರಣದಿಂದಲೇ ಗೌರಿ ಸದಾಶಿವನ ಭೇಟಿಯಾಗಲಿಲ್ಲ,ಹಾಗೆ  ಅಂದು ಗೌರಿಯನ್ನು ನೋಡಲು ಬಂದ ಯುವಕನ ಜೊತೆಗೆ ಗೌರಿಯ ಮದುವೆ ನಿಶ್ಚಯವಾಯ್ತು. ವೇಗವಾಗಿಯೇ ಮದುವೆಯ ದಿನವೂ ಹತ್ತಿರ ಬಂತು, ಬಿಳಿ ರೇಷ್ಮೆಯ ಸೀರೆಯುಟ್ಟ ಗೌರಿ: ಮಂಗಳ ಗೌರಿಯಂತೆ ಕಾಣುತ್ತಿದ್ದಳು, ಒಡವೆಯಿಂದ ಅಲಂಕೃತಳಾದ ಗೌರಿಯ ಮುಖದಲ್ಲಿ ನಗುವೆಂಬ ಒಡವೆ ಮಾಯವಾಗಿತ್ತು. ವಿಷ ತೆಗೆದುಕೊಂಡು  ಆತ್ಮಹತ್ಯೆ ಮಾಡಿಕೊಳ್ಳಬೇಕೆಂದಿದ್ದರೂ  ಹಸೆಮಣೆ ಏರುವ ಸಮಯದಲ್ಲಾದರೂ ನನ್ನ ವಿವಾಹ ನಿಶ್ಚಯವಾಗಿರುವ ವಿಷಯವನ್ನು ಅರಿತ ಸದಾಶಿವ ಬರುವನೆಂಬ ಆಸೆಯಿಂದ ಕಾಯುತ್ತಿದ್ದಳು, ಹಸೆಮಣೆಯಲ್ಲಿ ಕುಳಿತು ಕೂಡ ಸದಾಶಿವನ ಬರುವಿಕೆಗಾಗಿ ಎದುರು ನೋಡುತ್ತಿದ್ದಳು..

 ಮುಂದುವರಿಯುವುದು

✍🏻 ನಾಗಶ್ರೀ ಎಸ್ ಭಂಡಾರಿ
ಮೂಡುಬಿದಿರೆ

Comments

Popular posts from this blog

ಹೆಮ್ಮೆಯ ಭಂಡಾರಿ ಪ್ರತಿಭೆ : 4 - ಸಂದೀಪ್ ಭಂಡಾರಿ

ಸದಾಶಿವ. ಸಂಚಿಕೆ - 2

ಸದಾಶಿವ - ಸಂಚಿಕೆ-32