ಸದಾಶಿವ - ಸಂಚಿಕೆ-31

ಸದಾಶಿವ

ಸಂಚಿಕೆ-31

ಗೌರಿಯ ಜಡೆ ಹಿಡಿದು ಎಳೆದು ,ಅವಳ ಸೀರೆಯ ಸೆರಗಿಗೆ ಕೈ ಹಾಕಿದ, ಆಗ ಗೌರಿಗೆ.ಎಲ್ಲಿಲ್ಲದ ಕೋಪ ಬಂದಿತು. ಮೊದಲೇ ಹಳ್ಳಿ ಹುಡುಗಿ ,ಕಲಿತ ಹುಡುಗಿ, ಆ ಪುಂಡ ಯುವಕನ ಕೈಯನ್ನು ಕಚ್ಚಿದ್ದಳು. ಅಷ್ಟರಲ್ಲಿ ಅವನ ಉಳಿದ ಮೂವರು ಗೆಳೆಯರು ಕೂಡ ಅವಳ ಹತ್ತಿರಕ್ಕೆ ಬಂದಿದ್ದರು.ಗೌರಿ ಅವರಿಂದ ತಪ್ಪಿಸಿಕೊಂಡು ಹೋಗುವಾಗ ,ಕಾಲು ಎಡವಿ ಮರಳಿನ ಮೇಲೆ ಬಿದ್ದಳು.ಆ ನಾಲ್ವರು ಗೌರಿಯ ಹತ್ತಿರ ಬರತೊಡಗಿದರು, ಆ ಸಂದರ್ಭದಲ್ಲಿ ಗೌರಿಯ ತಲೆ ವೇಗವಾಗಿ ಓಡತೊಡಗಿತು, ತಾತ್ಕಾಲಿಕ ಉಪಾಯವೊಂದನ್ನು ಮಾಡಿಕೊಂಡಳು, ರೌಡಿಗಳು ಗೌರಿಯ ಮುಖದತ್ತ ಬಾಗಿದಾಗ ಕೈಯಲ್ಲಿ ಹಿಡಿದುಕೊಂಡಿದ್ದ ಮರಳನ್ನು ಆ ನಾಲ್ವರ ಮುಖದತ್ತ ರಪರಪನೆ ಎರಚಿದಳು. ರೌಡಿಗಳು ಅಯ್ಯೋ ,ಅಮ್ಮಾ ಎಂದು ಕಣ್ಣುಜ್ಜಿಕೊಳ್ಳುವಷ್ಟರಲ್ಲಿ ಗೌರಿ ಅವರಿಂದ ತಪ್ಪಿಸಿಕೊಂಡಳು. ಅಷ್ಟರಲ್ಲಿ ಮಾರ್ಗದಲ್ಲೊಂದು  ಟ್ಯಾಕ್ಸಿ ಬರುತ್ತಿತ್ತು,ಕೈ ಅಡ್ಡ ಹಿಡಿದಾಗ ನಿಲ್ಲಿಸಿದರು ಅವಸರದಿಂದಲೇ ಹತ್ತಿ, ತಾನಿರುವ ವಿಳಾಸವನ್ನು ಹೇಳಿದಳು. ಗಾಬರಿಯಿಂದ ಗೌರಿಯ ಮುಖ ಬೆವರಿತ್ತು, ರೌಡಿಯ ಎಳೆದಾಟದಿಂದ ಸೀರೆ ಅಸ್ತವ್ಯಸ್ತವಾಗಿತ್ತು, ಅವಳ ಪರಿಸ್ಥಿತಿಯನ್ನು ನೋಡಿದ ಟ್ಯಾಕ್ಸಿ ಡ್ರೈವರ್ ಅವಳಿಗೆ ನೀರು ತೆಗೆದು ಕೊಟ್ಟ.ಟ್ಯಾಕ್ಸಿಯವನು ಏನಾಯಿತೆಂದು ಅವಳಲ್ಲಿ  ಕೇಳಿದಾಗ ,ಏನಿಲ್ಲವೆಂದು ಮಾತು ತೇಲಿಸಿದಳು. ಅಷ್ಟರಲ್ಲಿ ಅವಳಿದ್ದ ಹೊಟೇಲ್ ಬಂದಿತು. ಟ್ಯಾಕ್ಸಿಯವನಿಗೆ  ಹಣ ಕೊಟ್ಟು ಧನ್ಯವಾದವನ್ನು ತಿಳಿಸಿ ,ತನ್ನ ಕೋಣೆಯತ್ತ ಹೊರಟಳು,ಕೋಣೆಗೆ ಬಂದು ಬಿಕ್ಕಿಬಿಕ್ಕಿ ಅಳತೊಡಗಿದಳು. ದೇವರೇ, ನನಗೆ ಇಷ್ಟೊಂದು ಶಿಕ್ಷೆ ಏಕೆ  ಕೊಡುತ್ತಿರುವೆ.ಕಾಮುಕರ ಕೈಯಿಂದ ನನ್ನನ್ನು ರಕ್ಷಿಸಿದೆ ,ಆದರೆ ನನ್ನ ಸದಾಶಿವನನ್ನು ಏಕೆ ನನ್ನಿಂದ ದೂರ ಮಾಡುತ್ತಿರುವೆ. ನನಗವನು ಸಿಗುವಂತೆ ಮಾಡು ,ನಮ್ಮಿಬ್ಬರನ್ನು ಒಂದು ಮಾಡು ,ಎಂದು ಧೀನಳಾಗಿ ಬೇಡಿಕೊಂಡಳು. ಎಸ್ಟೇಟಿನಲ್ಲಿ ಸಣ್ಣದೊಂದು ಕಾರಣಕ್ಕೆ ಸದಾಶಿವ ಒಬ್ಬ ಕೆಲಸಗಾರನಿಗೆ ಹೊಡೆದಿದ್ದ .ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ರಂಗ  ಎಂಬ ಕೆಲಸಗಾರ ಬೀಡಿ ಸೇದಿ ,ಕುಡಿದು ಬಂದು, ಎಸ್ಟೇಟಿನ ಕೆಲಸಗಾರರಲ್ಲಿ ಒಬ್ಬಳಾದ ನಿಂಗಿ ಎಂಬಾಕೆ ಜೊತೆ ಅಸಭ್ಯವಾಗಿ ವರ್ತಿಸಿದ್ದ. ಇದರಿಂದ ನೊಂದುಕೊಂಡ ನಿಂಗಿ ಬಂದು ಸದಾಶಿವನಲ್ಲಿ ದೂರನ್ನಿತ್ತಳು. ಹೆಣ್ಣು ಎಂದರೆ ತಾಯಿಯಂತೆ ಎಂದು ಭಾವಿಸಿದ ಸದಾಶಿವನಿಗೆ ,ರೋಷ ಉಕ್ಕೇರಿತು ,ಮಲಗಿದ್ದ ಹಾವನ್ನು ಎಬ್ಬಿಸಿದಂತೆ ಆಯಿತು.ಕೋಪದಿಂದ ಸದಾಶಿವ ರಂಗನಿದ್ದೆಡೆಗೆ ಬಂದ. ಅವನಿಗೆ ಒದ್ದು, ಮುಷ್ಟಿ ಬಿಗಿದು  ದವಡೆಗೆ ಬಾರಿಸಿದ,  ಬಾರಿಸಿದ ಏಟಿಗೆ ರಂಗನ ಹಲ್ಲುಗಳೆರಡು ಮುರಿದುಬಿದ್ದಿತು. ಸದಾಶಿವ ಎಷ್ಟು ಕುಪಿತಗೊಂಡಿದ್ದನೆಂದರೆ, ರಂಗನ ಕೂದಲನ್ನು ಜಗ್ಗಿಸಿ ,ಬಳಿಯಿದ್ದ ಕಲ್ಲಿಗೆ ತಲೆಯನ್ನು ಬಡಿದ. ರಂಗನ ಹಣೆ ಒಡೆದು ರಕ್ತ ಹರಿಯತೊಡಗಿತು, ರಂಗ ನೋವು ತಾಳಲಾರದೆ ತಲೆ ತಿರುಗಿ ಬಿದ್ದ. ಇದಿಷ್ಟನ್ನು ಕಂಡ ಕೆಲಸಗಾರರೆಲ್ಲ ಭಯಭೀತರಾದರು. ಜ್ಞಾನತಪ್ಪಿದ್ದ  ರಂಗನನ್ನು ಕಂಡು ಸದಾಶಿವ ಕೊಂದೇ ಬಿಟ್ಟ ಎಂದುಕೊಂಡು ಭಯಗೊಂಡರು.ಅಷ್ಟರಲ್ಲಿ ಸುದ್ದಿ ತಿಳಿದ ಸುಬ್ರಮಣ್ಯಸ್ವಾಮಿ ಬಂದು ನೋಡಿದಾಗ  ಅಲ್ಲಿ...

 ಮುಂದುವರಿಯುವುದು

✍🏻 ನಾಗಶ್ರೀ ಎಸ್. ಭಂಡಾರಿ ಮೂಡುಬಿದಿರೆ

Comments

Popular posts from this blog

ಹೆಮ್ಮೆಯ ಭಂಡಾರಿ ಪ್ರತಿಭೆ : 4 - ಸಂದೀಪ್ ಭಂಡಾರಿ

ಸದಾಶಿವ. ಸಂಚಿಕೆ - 2

ಸದಾಶಿವ - ಸಂಚಿಕೆ-32