ಸದಾಶಿವ - ಸಂಚಿಕೆ-29
ಸದಾಶಿವ
ಸಂಚಿಕೆ-29
ಮಗಳನ್ನು ರಕ್ಷಿಸುವ ಭರದಲ್ಲಿ ಹಿಂಬದಿಯಿಂದ ಬೆಂಕಿ ಹಿಡಿದ ಪಕ್ಕಾಸಿನ ತುಂಡೊಂದು ತನ್ನ ಮೇಲೆ ಬೀಳುತ್ತಿದೆ ಎನ್ನುವುದನ್ನೇ ಮರೆತು ಬಿಟ್ಟಳು, ಅಷ್ಟರಲ್ಲಾಗಲೇ
ಪಕ್ಕಾಸಿನ ತುಂಡು ಗಿರಿಜೆಯ ಮೇಲೆ ಬಿದ್ದು,ಅವಳುಟ್ಟಿದ್ದ ರೇಶಿಮೆ ಸೀರೆಗೆ ಬೆಂಕಿಹಿಡಿದು ಗಿರಿಜಾ ಬೆಂಕಿಯಲ್ಲಿ ಭಗಭಗನೆ ಉರಿಯ ತೊಡಗಿದಳು. ತನ್ನ ಕಣ್ಣೆದುರೇ ತನ್ನ ತಾಯಿ ಹೊತ್ತಿ ಉರಿಯುತ್ತಿರುವುದನ್ನು ಕಂಡ ಗಂಗಾ 'ಅಮ್ಮಾ' ಎಂದರಚಿ ಪ್ರಜ್ಞೆ ತಪ್ಪಿ ಬಿದ್ದಳು.ಗಂಗಾಳ ತಾಯಿ ಉರಿಯುತ್ತಿರುವುದನ್ನು ಕಂಡ ಸುತ್ತಮುತ್ತಲಿನ ಜನರು ಗೋಣಿಯನ್ನು ಹಿಡಿದುಕೊಂಡು ಬೆಂಕಿಯನ್ನು ನಂದಿಸಲು ಪ್ರಯತ್ನಿಸಿದರು. ಅಷ್ಟರಲ್ಲಾಗಲೇ ಗಿರಿಜ ಅರೆಬೆಂದು ಜೀವಂತ ಶವವಾಗಿದ್ದಳು.ಮಗು ಪ್ರಜ್ಞೆ ತಪ್ಪಿ ಬಿದ್ದಿದ್ದನ್ನು ಗಮನಿಸಿದ ಯಾರೋ ಒಬ್ಬರು ಅವಳನ್ನು ಎತ್ತಿ ಗುಡಿಸಲಿನಿಂದ ಹೊರ ತಂದರು.ತಾಯಿ ಮತ್ತು ಮಗಳು ಇಬ್ಬರನ್ನು ತುರ್ತಾಗಿ ಆಸ್ಪತ್ರೆಗೆ ಸೇರಿಸಲು ಹೊರಟಾಗ, ಮಾರ್ಗ ಮಧ್ಯದಲ್ಲಿ ಗಿರಿಜೆಯ ಪ್ರಾಣ ಪಕ್ಷಿ ಹಾರಿ ಹೋಗಿತ್ತು. ಅಷ್ಟರಲ್ಲಾಗಲೇ ಈ ವಿಚಾರವನ್ನು ಅರ್ಚಕರು ತಮ್ಮ ಪರಿಚಯದವರಲ್ಲಿ ಹೇಳಿ ಸುಬ್ರಹ್ಮಣ್ಯ ಸ್ವಾಮಿಗೆ ಸುದ್ದಿ ಮುಟ್ಟಿಸಿದರು. ಗಾಬರಿಯಿಂದಲೇ ಆಸ್ಪತ್ರೆಗೆ ಬಂದ ಸುಬ್ರಹ್ಮಣ್ಯ ಸ್ವಾಮಿ ಗಿರಿಜೆಯ ಶವ ಕಂಡು ದುಃಖ ತಡೆಯದೆ ನೋವಿನಿಂದ ಅತ್ತರು.ಮಗಳು ಎಲ್ಲೆಂದು ವೈದ್ಯರಲ್ಲಿ ಕೇಳಿದಾಗ ಗಂಗಾಳಿದ್ದಲ್ಲಿಗೆ ಕರೆದುಕೊಂಡು ಹೋದರು,ಪ್ರಾಣಕ್ಕೇನೂ ಅಪಾಯವಿಲ್ಲ ಪ್ರಜ್ಞೆ ತಪ್ಪಿದ್ದಾಳಷ್ಟೇ.ಇನ್ನು ಸ್ವಲ್ಪ ಹೊತ್ತಿನಲ್ಲೇ ಪ್ರಜ್ಞೆ ಬರಬಹುದು ಎಂದಾಗ ಮಗಳನ್ನಪ್ಪಿ
ದುಃಖಿಸತೊಡಗಿದರು. ಪ್ರಜ್ಞೆ ಬಂದಾಗ ಗಂಗಾಳ ಕಣ್ಣ ಮುಂದೆ ಬೆಂಕಿಯಲ್ಲಿ ಉರಿಯುತ್ತಿದ್ದ ತಾಯಿಯ ಆರ್ತನಾದವೇ ಕಾಣುತ್ತಿತ್ತು.ಪಕ್ಕದಲ್ಲೇ ಇದ್ದ ತಂದೆಯನ್ನಪ್ಪಿ ,ಅ ಅ ಅ ಎಂದು ಅಳತೊಡಗಿದಳು.
ಮಗಳೇಕೆ ಮಾತನಾಡುತ್ತಿಲ್ಲವೆಂದು ಗಾಬರಿಗೊಂಡ ಸುಬ್ರಮಣ್ಯಸ್ವಾಮಿ ವೈದ್ಯರನ್ನು ಕರೆದಾಗ,ಗಂಗಾಳನ್ನು ಪರೀಕ್ಷಿಸಿದ ವೈಧ್ಯರು ತಾಯಿ ಕಣ್ಣೆದುರಿನಲ್ಲಿ ಸತ್ತಿದ್ದರಿಂದ ನಿಮ್ಮ ಮಗಳು ಮಾತು ಕಳೆದುಕೊಂಡಿದ್ದಾಳೆ,ಮುಂದೆ ಮಾತು ಬರಲೂಬಹುದು,ಶಾಶ್ವತವಾಗಿ ಹೋಗಲೂಬಹುದು ಎಂದಾಗ ,ಸುಬ್ರಹ್ಮಣ್ಯ ಸ್ವಾಮಿ ಹೆಂಡತಿ ಸತ್ತ ನೋವಿನ ಜೊತೆಗೆ ಮಗಳು ಮೂಗಿಯಾದಳಲ್ಲ ಎಂಬ ನೋವು ಕಾಡಿತು. ಸುಖದಿಂದ ಇದ್ದ ಸಂಸಾರಕ್ಕೆ ಬರ ಸಿಡಿಲು ಬಡಿದಂತಾಯಿತು. ಈಶ್ವರನ ಸನ್ನಿಧಾನಕ್ಕೆ ಬಂದ ಗಿರಿಜೆಯ ಪ್ರಾಣ ಈಶ್ವರನ ಸನ್ನಿಧಾನವನ್ನೇ ಸೇರಿತು.ಎಲ್ಲರಿಗೂ ಒಳಿತಾಗಬೇಕೆಂದು ಬೇಡಿದ ಗಂಗಾಳಿಗೆ ದೇವರು ಕೆಡುಕನ್ನು ಮಾಡಿದ. ತಾಯಿಯನ್ನು ಕಿತ್ತುಕೊಂಡ,ಮಾತನ್ನು ಕಸಿದುಕೊಂಡ.. ಈ ದೇವರೇ ಹೀಗೆ ಸುಖ ನೀಡುವಾಗ ಸಹಿಸಲಾರದಷ್ಟು ಸಂತಸವನ್ನು ನೀಡುತ್ತಾನೆ, ದುಃಖ ನೀಡುವಾಗ ಮೇಲಿಂದ ಮೇಲೆ ಕಷ್ಟಗಳ ಮಳೆಯನ್ನೇ ಸುರಿಸುತ್ತಾನೆ, ಕೆಲವೊಮ್ಮೆ ಬೇಡಿದ್ದನ್ನು ಥಟ್ಟನೇ ನೆರವೇರಿಸುತ್ತಾನೆ.ಇನ್ನು ಕೆಲವೊಮ್ಮೆ ಸತಾಯಿಸುತ್ತಾನೆ..ಎಷ್ಟೇ ಆಗಲಿ ಅವನಾಡಿಸಿದಂತೆ ನಾವಡಬೇಕು ತಾನೆ! ಆದರೆ ಸತ್ಯ, ನ್ಯಾಯ, ನೀತಿ, ಪ್ರಾಮಾಣಿಕತೆಯಿಂದ ಬದುಕುವವರನ್ನು ಈಶ್ವರ ನೆಂದು ಕೈಬಿಡುವುದಿಲ್ಲ ಸಲಹಿ ಪೊರೆಯುತ್ತಾನೆ. ಗಂಗಾಳಿಗೆ ಒಳಿತು ಮಾಡುತ್ತಾನೋ, ಇಲ್ಲವೋ ,ಕಾದು ನೋಡಬೇಕಷ್ಟೇ..
ಮುಂದುವರಿಯುವುದು
ನಾಗಶ್ರೀ.ಎಸ್ ಭಂಡಾರಿ ಮೂಡಬಿದಿರೆ

Comments
Post a Comment