ಸದಾಶಿವ - ಸಂಚಿಕೆ - 28

ಸದಾಶಿವ

ಸಂಚಿಕೆ - 28

     ಈಶ್ವರನ ದೇವಸ್ಥಾನದಲ್ಲಿ ಪೂಜೆ ಹೇಳಿದ್ದ ಕಾರಣ, ಕಾಡಿನ ನಡುವೆ ಇದ್ದ ಪುರಾತನ ಶಿವ ದೇವಾಲಯಕ್ಕೆ ತೆರಳಿದ್ದರು, ಸುತ್ತಲೂ ಗಿಡ ಮರಗಳಿದ್ದು, ದೇವಸ್ಥಾನದ ಮುಂದುಗಡೆ ಕಾಡು ಪುಷ್ಪಗಳ ಸುಂದರ ಗಿಡಗಳಿದ್ದವು, ವಿಶಾಲವಾದ ಅಂಗಣವು ಮಳೆಗೆ ಪಾಚಿ ಹಿಡಿದಿದ್ದು, ಕಲ್ಲುಗಳಲ್ಲಿ ಸುಂದರ ಚಿತ್ತಾರಗಳಿದ್ದವು. ದೇವಸ್ಥಾನದ ಗರ್ಭಗುಡಿಯೊಳಗೆ ಶಿವಲಿಂಗವಿತ್ತು,ಪ್ರಕೃತಿಯ ಮಡಿಲಲ್ಲಿ ಆ ಶಿವಲಿಂಗ ಶೋಭಿಸುತ್ತಿತ್ತು. ಮೇಲಿನಿಂದ ಹನಿ ನೀರು ತೊಟ್ಟಿಕ್ಕುತ್ತಿತ್ತು.ಬೆಳ್ಳಂಬೆಳಿಗ್ಗೆಯೇ ಅರ್ಚಕರು ಶಿವಾಲಯದ ಸುತ್ತಲೂ ಶುಭ್ರಗೊಳಿಸಿ ,ಶಿವನಿಗೆ ಕಾಡು ಪುಷ್ಪಗಳಿಂದ ಅಲಂಕಾರವನ್ನು ಮಾಡಿದ್ದರು. ಗಂಗಾ ಹಾಗೂ ಅವಳ ತಾಯಿ ಗಿರಿಜ ಹಣ್ಣುಕಾಯಿ ಮಾಡಿಸಲೆಂದು ತೆಂಗಿನಕಾಯಿ ಮತ್ತು ಬಾಳೆಹಣ್ಣನ್ನು ಬುಟ್ಟಿಯಲ್ಲಿ ಹಾಕಿಕೊಂಡು ಬಂದಿದ್ದರು. ಅರ್ಚಕರು ಅವರ ಕೈಯಿಂದ ಬುಟ್ಟಿಯನ್ನು ತೆಗೆದುಕೊಂಡು, ಪೂಜೆಯನ್ನು ಮಾಡುತ್ತಿದ್ದಾಗ ,ಗಂಗಾ ಈಶ್ವರನ ಭವ್ಯ ಮೂರ್ತಿಯನ್ನು ಕಂಡು ಭಕ್ತಿಪರವಶಳಾಗಿ ಲಿಂಗವನ್ನೇ ದಿಟ್ಟಿಸಿ ನೋಡುತ್ತಿದ್ದಳು ,ಅವಳ ಹೃದಯದಲ್ಲಿ ಈಶ್ವರನ ಮೇಲೆ ಭಕ್ತಿ ಭಾವಗಳೆರಡೂ ಉಂಟಾಗಿ ಹೃದಯ ತುಂಬಿ ಬಂದಿತು. ಸಕಲರನ್ನು ಪೊರೆದು, ಸರ್ವರಿಗೂ ಒಳಿತನ್ನು ಮಾಡಿ,ನಮ್ಮೂರಿನ ಜನರಿಗೆ,ಮಕ್ಕಳಿಗೆ ಈ ಪ್ರಕೃತಿ ಎಲ್ಲವೂ ಸುಂದರವಾಗಿ, ಸಂತಸದಿಂದಿರುವಂತೆ ಮಾಡೆಂದು ಮನಸಾರೆ ಪ್ರಾರ್ಥಿಸಿದಳು.ಗಂಗಾ 'ಗಂಗೆಯಷ್ಟೇ'ಪವಿತ್ರಳು. ಕರುಣಾಮಯಿ ಆ ಗಂಗಾ ತಾಯಿ ಕೂಡ, ತಾನು ಮಲಿನವಾಗಿ ಸಕಲರ ಪಾಪವನ್ನು ತೊಳೆಯುವ ಮಹಾ ತಾಯಿ.ಶಿವನನ್ನು ಹೇಗೆ *ಹರಹರ ಶಿವ* ಎಂದು  ಕರೆಯುತ್ತೇವೋ ಹಾಗೆ ಗಂಗೆಯನ್ನು ಕೂಡ *ಹರಹರ ಗಂಗೆ* ಎಂದು ಕರೆಯುತ್ತಾರೆ. ಗಿರಿಜೆಯ ಮಗಳು  ಅವಳಂತೆಯೇ, ತನಗಾಗಿ ಏನನ್ನೂ ಬೇಡದೆ ,ಸರ್ವರಿಗೂ ಒಳಿತನ್ನು ಬಯಸುವ ಮನಸ್ಸಿನವಳು .ಈಶ್ವರನ ಧ್ಯಾನದಿಂದ ಹೊರಬಂದ ಗಂಗಾ ಅರ್ಚಕರು ನೀಡಿದ ಆರತಿಗೆ ಕೈ ಮುಗಿದು, ತಾಯಿಯ ಜೊತೆಯಲ್ಲಿ ಹೊರ ಬಂದಳು.ಆ ಸಂದರ್ಭದಲ್ಲಿ ಕಾಡಿನಲ್ಲಿ ಅಯ್ಯೋ ;ಅಮ್ಮಾ; ಎಂಬ ಆರ್ತನಾದ ಕೇಳಿಸಿತು. ಅರ್ಚಕರು ದಿಗ್ಭ್ರಾಂತರಾಗಿ, ಏನಾಯಿತೆಂದು ಗರ್ಭಗುಡಿಯಿಂದ ಹೊರಬಂದು ,ಆರ್ತನಾದ ಬಂದತ್ತ ಓಡತೊಡಗಿದರು .ಅಲ್ಲಿ ಗುಡಿಸಲೊಂದಕ್ಕೆ ಬೆಂಕಿ ತಗುಲಿ ಒಳಗಿದ್ದವರು ಬೆಂಕಿಯ ಬೇಗೆಯ ನೋವಿನಿಂದ ಚೀರಾಡತೊಡಗಿದರು. ಅರ್ಚಕರು ಓಡಿದತ್ತಲೇ ಓಡಿದರು ಗಂಗಾ ಗಿರಿಜಾ. ಗಂಗಾಳ ತಾಯಿ  ಇತರ ಗುಡಿಸಲಿನವರ ಮನೆಯಿಂದ ನೀರು ತಂದು ಆ ಬೆಂಕಿ ಬಿದ್ದ ಮನೆಗೆ ನೀರು ತಂದು ಸುರಿದು ಸಹಾಯ ಮಾಡತೊಡಗಿದಳು.
ಎಲ್ಲರೂ ಬೆಂಕಿ ನಂದಿಸುವುದರಲ್ಲೇ ನಿರತರಾಗಿದ್ದಾಗ ಗಂಗಾಳು ತಾನು ಸಹ ಸಹಾಯ ನೀಡಲೆಂದು ಸಿಕ್ಕ ಸಣ್ಣ ಪ್ಲಾಸ್ಟಿಕ್ ಪಾತ್ರೆಯಲ್ಲಿ ನೀರು ತುಂಬಿಸಿಕೊಂಡು ಬೆಂಕಿ ಬಿದ್ದ ಮನೆಯತ್ತ ತೆರಳಿದಳು, ಗಂಗಾ ನೀರು ಹಿಡಿದುಕೊಂಡು ಮನೆಯೊಳಗೆ ಹೋದದ್ದನ್ನು ಯಾರೂ ಗಮನಿಸಿಯೇ ಇರಲಿಲ್ಲ,ಒಳಗಿದ್ದವರು ಕೂಡ ಹೊರಬಂದು ಪಾರಾಗಿದ್ದರು. ಅಷ್ಟರಲ್ಲಿ ಗುಡಿಸಲಿನಲ್ಲಿದ್ದ ಮರದ ತುಂಡೊಂದು ಗಂಗಾಳ ಎದುರೇ ಮುರಿದು ಬಿತ್ತು. ಆಗ ಗಂಗಾ 'ಅಮ್ಮಾ' ಎಂದು ಕೂಗಿದಳು, ಮಗಳು ಗುಡಿಸಲೊಳಗೆ ಅಳುವುದನ್ನು ಕೇಳಿಸಿಕೊಂಡ ಗಿರಿಜಾ ಗಂಗಾ ಎಂದು ಕೂಗುತ್ತಾ ಗುಡಿಸಲಿನೊಳಗೆ ಓಡಿದಳು...

 ಮುಂದುವರಿಯುವುದು

✍🏻 ನಾಗಶ್ರೀ ಎಸ್ ಭಂಡಾರಿ ಮೂಡಬಿದಿರೆ

Comments

Popular posts from this blog

ಹೆಮ್ಮೆಯ ಭಂಡಾರಿ ಪ್ರತಿಭೆ : 4 - ಸಂದೀಪ್ ಭಂಡಾರಿ

ಸದಾಶಿವ. ಸಂಚಿಕೆ - 2

ಸದಾಶಿವ - ಸಂಚಿಕೆ-32