ಸದಾಶಿವ - ಸಂಚಿಕೆ -21

ಸದಾಶಿವ

ಸಂಚಿಕೆ -21

    ತಂದೆಯ ಮುಖ ಕಂಡಿತು, ತಂದೆಗೆ ತನ್ನಿಂದ ನೋವಾಗಿದೆ, ಆದರೂ ತನ್ನನ್ನು  ಸಮಾಧಾನಿಸಲು ಬಂದಿದ್ದಾರೆ ಎಂದು ಗೊತ್ತಾಗಿ ,ಎದ್ದು ನಿಂತ. ಮಗನ ಹೆಗಲ ಮೇಲೆ ಕೈ ಹಾಕಿದ ರಾಯರು, ಕುಳಿತುಕೊ ;ಎಂದು ಹೇಳಿ ತಾವು ಅವನ ಪಕ್ಕ ಕುಳಿತು, *ಸದಾ* ನಿನಗೊಂದು ಮಾತು ಹೇಳುತ್ತೇನೆ ಕೇಳು, ಕೋಪವನ್ನ ನಿನ್ನ  ಹಿಡಿತದಲ್ಲಿಟ್ಟುಕೊ, ಖಂಡಿಸುವುದು ತಪ್ಪಲ್ಲ; ಆದರೆ ಅದಕ್ಕಾಗಿ ಹೊಡೆಯುವುದೇ ಮಾರ್ಗವಲ್ಲ ,ತಪ್ಪು ಮಾಡಿದರೆ ಮಾತಿನಲ್ಲೇ ಸಮಾಧಾನಿಸಲು ನೋಡು, 'ಉಗುರಿನಲ್ಲಿ ಹೋಗುವ ಕೆಲಸಕ್ಕೆ ಕೊಡಲಿ ಎತ್ತಬೇಡ', 'ಕೋಪದಿಂದ ಕುಯ್ದುಕೊಂಡ ಮೂಗು ಮತ್ತೆ ಬರುವುದಿಲ್ಲ' , ಕೋಪ ಸಂಬಂಧವನ್ನು ಹಾಳು ಮಾಡುತ್ತದೆ, ಚಾಡಿ  ಸಂಸಾರವನ್ನು ಹಾಳು ಮಾಡುತ್ತದೆ,ಅಸೂಯೆ ಮನಸ್ಸನ್ನು ಹಾಳು ಮಾಡುತ್ತದೆ, ಅಪನಂಬಿಕೆ ಜೀವನವನ್ನೇ ಹಾಳು ಮಾಡುತ್ತದೆ ,ಇನ್ನು ನಿನಗೆ ಯಾರು ಹೊಡೆದರೋ ಅವರು ನಿನ್ನ ಶತ್ರುಗಳೇ ಆಗಬೇಕೆಂದಿಲ್ಲ ನಿನ್ನವರು ನಿನಗೆ ಹೊಡೆದಾಗ ಆಗ ತಾಳ್ಮೆ ಮುಖ್ಯ.. ಹಿರಿಯರಂದ ಮಾತಿನಂತೆ,

ಪಿತೃಬಿಃ ತಾಡಿತಃ ಪುತ್ರಃ
ಶಿಷ್ಯಸ್ತು ಗುರುಶಿಕ್ಷಿತಃ,
ಘನಾಹತಂ ಸುವರ್ಣಂ ಚ, ಜಾಯತೇ ಜಲಮಂಡನಮ್

    ಮಗನೇ ,ತಂದೆಯಿಂದ ಹೊಡೆಸಿಕೊಂಡ ಮಗ, ಗುರುವಿನಿಂದ ಶಿಕ್ಷೆಗೊಳಗಾದ ಶಿಷ್ಯ, ಸುತ್ತಿಗೆಯ ಏಟು ತಿಂದ ಚಿನ್ನ ,ಲೋಕ ಬೆಳಗುವುದು ನಿಶ್ಚಿತ, ಹಾಗಾಗಿ ನೀನು ಕೂಡ ಲೋಕ ಬೆಳಗುವ ಚಿನ್ನವಾಗು, ಊರಿಗೆ ಉಪಕಾರಿಯಾಗಿ, ಮುಂಗೋಪ ಬಿಟ್ಟು, ಮುನ್ನಡೆ ಎಂದು  ಬುದ್ಧಿಮಾತು ಹೇಳಿದಾಗ, ಸದಾಶಿವ ತಲೆಯಲ್ಲಾಡಿಸಿದ. ಒಟ್ಟಾರೇ  ಸದಾಶಿವನ ತಲೆಗೆ ಹೋದ ವಿಷಯವೇನೆಂದರೆ, ನಾನೇನು ತಪ್ಪು ಮಾಡಿದರೂ ತಂದೆಗೆ ಗೊತ್ತಾಗಬಾರದು, ಅವರಿಗೆ ನೋವಾಗಬಾರದು, ಎಂದು ಮಾತ್ರ.ಆದರೂ ಸದಾಶಿವ ಸ್ವಲ್ಪ ಸಮಯ ಯಾವ ತಂಟೆ ತಕರಾರಿಗೂ ಹೋಗದೆ ವಿನೀತನಾಗಿ ಶಾಲೆಗೆ ಹೋಗಿ ಬರುತ್ತಿದ್ದ. ಗೌರಿ ಅವನ ನೆಚ್ಚಿನ ಒಡನಾಡಿಯಾಗಿದ್ದಳು. ಗಣೇಶ ತಲೆಗೆ ಹೊಡೆದ ಮೇಲೆ ಸದಾಶಿವನ ತಂಟೆಗೆ ಯಾರೂ ಹೋಗುತ್ತಿರಲಿಲ್ಲ, ಸದಾಶಿವನೆಂದರೆ ಎಲ್ಲರಿಗೂ ಭಯವಾಗುತ್ತಿತ್ತು. ಹತ್ತನೇ ತರಗತಿಯನ್ನು ಬಹಳ ಕಷ್ಟದಿಂದ ಮುಗಿಸಿದ ಸದಾಶಿವ ಕಲಿಕೆಗೆ ಪೂರ್ಣ ವಿರಾಮವನ್ನು ಇಟ್ಟ. ಹತ್ತನೇ ತರಗತಿ ಮುಗಿದು ಎರಡು ವರ್ಷವಾಯಿತು, ಈಗ ಸದಾಶಿವ ಹದಿನೇಳು ವರ್ಷದ ಬಾಲಕ, ಇಪ್ಪತ್ತೈದು ವರ್ಷದವರಂತೆ ಕಾಣುತ್ತಿದ್ದ ಅಗಲವಾದ ಕಣ್ಣುಗಳು ,ಚಿಗುರು ಮೀಸೆ, ವಿಶಾಲವಾದ ಬಾಹುಗಳು, ತುಂಬು  ಕೂದಲನ್ನು ಅಡ್ಡಲಾಗಿ ಬಾಚಿಕೊಂಡಿದ್ದ. ಕೈಕಾಲುಗಳು ಗಟ್ಟಿ ಮುಟ್ಟಾಗಿದ್ದವು  ,ಆರು ಅಡಿ ಎತ್ತರದ ಯುವಕ ಸದಾಶಿವ ,ಊರಿನಲ್ಲಿ ಕಟ್ಟು ಮಸ್ತಾದ ಯುವಕನೆನಿಸಿದ್ದ. ಹದಿನೇಳು ವರ್ಷದ ಬಾಲಕನನ್ನು ಯುವಕನೆಂದೇ ಅಂದುಕೊಂಡಿದ್ದರು. ಊರಿನ ಎಲ್ಲಾ ಹುಡುಗಿಯರಿಗೆ ಸದಾಶಿವನ ಸುಂದರ ರೂಪವೆ ಪ್ರಮುಖ ಆಕರ್ಷಣೆಯಾಗಿತ್ತು, ಸದಾಶಿವನ ರೂಪ ಊರಿನಲ್ಲಿ ಯಾರಿಗೂ ಇಲ್ಲವೆಂದು ಊರವರೇ ಹೇಳುತ್ತಿದ್ದರು. ಇತ್ತ ಸರಸಿ ಐದು ಜನ ಹೆಣ್ಣು ಮಕ್ಕಳು ,ಮತ್ತು ಒಂದು ಗಂಡು ಮಗುವಿಗೆ ಜನ್ಮವಿತ್ತಳು.ಒಂದು ದಿನ...

 ಮುಂದುವರಿಯುವುದು

 ನಾಗಶ್ರೀ.ಎಸ್. ಭಂಡಾರಿ ಮೂಡುಬಿದಿರೆ

Comments

Popular posts from this blog

ಹೆಮ್ಮೆಯ ಭಂಡಾರಿ ಪ್ರತಿಭೆ : 4 - ಸಂದೀಪ್ ಭಂಡಾರಿ

ಸದಾಶಿವ. ಸಂಚಿಕೆ - 2

ಸದಾಶಿವ - ಸಂಚಿಕೆ-32