ಸದಾಶಿವ - ಸಂಚಿಕೆ-19

ಸದಾಶಿವ

ಸಂಚಿಕೆ-19
 
    ಸಭಾ ಕಾರ್ಯಕ್ರಮವು ಪ್ರಾರಂಭವಾಯಿತು, ಸಭಾ ಕಾರ್ಯಕ್ರಮದಲ್ಲಿ ಶ್ರೀಪತಿ ರಾಯರು ಮತ್ತು ರಾಮರಾಯರು ಮುಖ್ಯ ಅತಿಥಿಗಳಾದ್ದರು. ಮೊದಲನೆಯದಾಗಿ ಸ್ಥಾಪಕ ಅಧ್ಯಕ್ಷರಾದ ಶ್ರೀಪತಿರಾಯರು ಶಾಲೆ ಮತ್ತು ಮಕ್ಕಳನ್ನ ಉದ್ದೇಶಿಸಿ ಒಂದೆರಡು  ಮಾತುಗಳನ್ನಾಡಿದರು. ಆ ನಂತರ ಊರಿನ ಕೆಲವು ಗಣ್ಯ ವ್ಯಕ್ತಿಗಳು ಮಾತನಾಡಿ ತಮ್ಮಿಂದ ಆಗುವಷ್ಟು ಧನ ಸಹಾಯವನ್ನು ಶಾಲೆಯ ಉತ್ತರೋತ್ತರ ಅಭಿವೃದ್ಧಿಗೆ ನೀಡುವುದಾಗಿ ಭರವಸೆಯನ್ನಿತ್ತರು. ಕೊನೆಯದಾಗಿ ಅಧ್ಯಕ್ಷೀಯ ಭಾಷಣ, ರಾಮರಾಯರ ಮಾತನ್ನು ಕೇಳಲು ಎಲ್ಲರೂ ಕಾಯುತ್ತಿದ್ದರು ,ಸರಸಿ ಕೂಡ ತನ್ನ ಪುಟ್ಟ ಮಕ್ಕಳೊಂದಿಗೆ ಮುತ್ತುಲಕ್ಷ್ಮಿಯನೊಡಗೂಡಿ ಬಂದಿದ್ದಳು. ರಾಮರಾಯರು ಮೊದಲು ದೇವರನ್ನು ನೆನೆದು ,ಅತಿಥಿಗಳಿಗೆ ವಂದನೆಗಳನ್ನು ಅರ್ಪಿಸಿ, ನಮ್ಮ ಈ ಶಾಲೆಯ ಸ್ಥಾಪಕ ಅಧ್ಯಕ್ಷರಾದ ಶ್ರೀಯುತ ಶ್ರೀಪತಿ ರಾಯರಿಂದ ಹಲವು ಮಕ್ಕಳ ಶಿಕ್ಷಣಕ್ಕೆ,ಅವರ ಉತ್ತಮ ಭವಿಷ್ಯಕ್ಕೆ ಉಪಕಾರವಾಗಿದೆ,ನಮ್ಮ ಶಾಲೆಯಲ್ಲಿ ಕಲಿತ ಮಕ್ಕಳು ವೈದ್ಯರು, ಶಿಕ್ಷಕರು, ರಾಜಕಾರಣಿಗಳು ,ಹೀಗೆ ಹಲವಾರು ಹುದ್ದೆಗಳಿಗೆ ಏರಿ  ಶಾಲೆಯ ಕೀರ್ತಿಯನ್ನು ಎತ್ತರಕ್ಕೆ ಕೊಂಡೊಯ್ದಿದ್ದಾರೆ. ಮಕ್ಕಳಿಗೆ ಕೃಷಿಯ ಬಗ್ಗೆ ಮಾಹಿತಿಯನ್ನು ನಾನು ಹಲವಾರು ಸಲ ನೀಡಿದ್ದೇನೆ," ಇಂದಿನ ಮಕ್ಕಳೇ ನಾಳಿನ ಪ್ರಜೆಗಳು" ಎನ್ನುವಂತೆ ಎಲ್ಲ ಮಕ್ಕಳು ಶಾಲೆಯ ಕೀರ್ತಿ ಪತಾಕೆಯನ್ನು ಇನ್ನಷ್ಟು ಎತ್ತರಕ್ಕೆ ಏರಿಸಬೇಕು ಆ ನಿಟ್ಟಿನಲ್ಲಿ ಮಕ್ಕಳ ಪೋಷಕರು, ಅಧ್ಯಾಪಕರು,ಶಾಲೆಯ ಆಡಳಿತ ಮಂಡಳಿ ಶ್ರಮ ವಹಿಸಬೇಕು, ಎಂದು ಹೇಳುತ್ತಾ ಭಾಷಣವನ್ನು ಮುಗಿಸಿದರು..ರಾಯರ ಮಾತನ್ನು ಕೇಳಿದ ಸೇರಿದವರೆಲ್ಲರೂ ಚಪ್ಪಾಳೆಯ ಸುರಿಮಳೆಯನ್ನೇ ಸುರಿಸಿದರು. ಸಭಾ ಕಾರ್ಯಕ್ರಮದ ನಂತರ ಮಕ್ಕಳಿಂದ ಸಾಂಸ್ಕೃತಿಕ  ಕಾರ್ಯಕ್ರಮವೆಂದಾಗ ವೇದಿಕೆಯ ಮೇಲಿನ ಗಣ್ಯರು, ತಮ್ಮ ತಮ್ಮ ಆಸನಗಳಿಂದ ಎದ್ದು ಕೆಳಗಿಳಿದು ಬಂದರು. ಮೊದಲ ನೃತ್ಯ ಗೌರಿಯದ್ದೇ ಆಗಿತ್ತು. ಗಣೇಶನ ಸ್ತುತಿಯನ್ನು ಮಾಡುವ ಹಾಡಿಗೆ ಭರತನಾಟ್ಯವನ್ನು ಮಾಡುತ್ತಿದ್ದ ಗೌರಿ ಪುಟಾಣಿ ದೇವಿಯಂತೆ ಕಾಣುತ್ತಿದ್ದಳು.ಗೌರಿಯನ್ನು ಎಲ್ಲರೂ ತದೇಕಚಿತ್ತದಿಂದ ನೋಡುತ್ತಿದ್ದರು.ಮೊಮ್ಮಗಳ ನಾಟ್ಯವನ್ನು ಕಂಡ ಶ್ರೀಪತಿರಾಯರಿಗೆ ಹೆಮ್ಮೆಯೆನಿಸುತ್ತಿತ್ತು.ಗೌರಿಯ ನಾಟ್ಯವನ್ನು ನೋಡಲು ಕಾಯುತ್ತಿದ್ದ ಸದಾಶಿವ ಪರದೆಯ ಹಿಂಬದಿಯಲ್ಲಿ ,ಒಂದು ಬದಿಯಲ್ಲಿ ನಿಂತು ಕಳ್ಳನೋಟದಿಂದ ವೀಕ್ಷಿಸುತ್ತಿದ್ದ.ಗೌರಿಯ ನೃತ್ಯ ಮುಗಿದು ,ಒಂದನೇ ತರಗತಿಯ ಮಕ್ಕಳಿಂದ ನೃತ್ಯ ಶುರುವಾಯಿತು. ಸದಾಶಿವನ ತಮ್ಮ ವಿಜಯನು ಮಕ್ಕಳೊಂದಿಗೆ ನೃತ್ಯ ಮಾಡತೊಡಗಿದ. ಸದಾಶಿವ ಗೌರಿಯ ನೃತ್ಯವಾದ ನಂತರ ತನ್ನ ನಾಟಕಕ್ಕೆ ವೇಷ ಧರಿಸಲು ವೇಷ ಧರಿಸುವ ತರಗತಿಗೆ ಬಂದ.ಅಲ್ಲಿ ಏಳನೇ ತರಗತಿಯ ಹುಡುಗನೊಬ್ಬ ತನ್ನ   ಕೆಲವು ಗೆಳೆಯರೊಂದಿಗೆ ಸೇರಿಕೊಂಡು ಸದಾಶಿವನ ನಾಟಕದ ಬಟ್ಟೆಯನ್ನು ಹಿಡಿದುಕೊಂಡು ಚೆಂಡಾಟವಾಡುತ್ತಿದ್ದ .
ತನ್ನ ನಾಟಕದ ಬಟ್ಟೆಯನ್ನು ಕೊಡಿ ಎಂದು ಸಮಾಧಾನವಾಗಿ ಕೇಳಿದರೂ ಅವರು ಇನ್ನಷ್ಟು ರೇಗಿಸುತ್ತಾ, ಬಟ್ಟೆಯನ್ನು ಅವನ ಮುಂದೆ ಹಿಡಿದು, ಒಬ್ಬರಿಗೊಬ್ಬರು ಬಿಸಾಡುತ್ತ,ನಗುತ್ತಾ
ಆಟವಾಡಿಸತೊಡಗಿದರು  ಸಮಾಧಾನದಿಂದ ಇದ್ದ ಸದಾಶಿವನಿಗೆ
ಅದೆಲ್ಲಿಂದ ಬಂದಿತೋ ಕೋಪ, ನಾಟಕಕ್ಕೆಂದು ತಂದಿಟ್ಟಿದ್ದ ದೊಣ್ಣೆಯಿಂದ ಒಬ್ಬ ಹುಡುಗನ ತಲೆಗೆ ಹೊಡೆದೇ ಬಿಟ್ಟ .ಆ ಹುಡುಗ 'ಅಮ್ಮಾ' ಎಂದರಚುತ್ತಾ ಕೆಳಗೆ ಬಿದ್ದ. ಆ ಹುಡುಗನ ಹಿಂಬದಿ ತಲೆ ಒಡೆದು ರಕ್ತ ಹರಿಯುತ್ತಿತ್ತು. ರಕ್ತ ಕಂಡು ಭಯ ಭೀತರಾದ ಇತರ ವಿದ್ಯಾರ್ಥಿಗಳು ಸದಾಶಿವ ,'ಗಣೇಶನ' ತಲೆ ಒಡೆದ ಎಂದು ಕೂಗುತ್ತ ತರಗತಿಯಿಂದ ಹೊರ ಓಡಿದರು. ಇತ್ತ ವೇದಿಕೆಯಲ್ಲಿ ನಾಟಕದ ಪಾತ್ರಧಾರಿಗಳ ಹೆಸರು ಕರೆಯುತ್ತಿದ್ದರೂ ಮಗ ಇನ್ನು ವೇದಿಕೆಗೆ ಏಕೆ ಬಂದಿಲ್ಲವೆಂದು ರಾಮರಾಯರು ಕಾಯುತ್ತಿದ್ದಾಗ, ಏಳನೇ ತರಗತಿಯ ವಿದ್ಯಾರ್ಥಿಗಳು ಓಡಿ ಬಂದು ,ಅಧ್ಯಾಪಕರಲ್ಲಿ ಸದಾಶಿವ ಗಣೇಶನ ತಲೆ ಒಡೆದ ವಿಚಾರವನ್ನು ಹೇಳಿದರು.ಈ  ವಿಚಾರವನ್ನು ಕೇಳಿದ ರಾಮರಾಯರು ಮತ್ತು ಅವರ ಮಡದಿ ಗಾಬರಿಯಿಂದ ವೇಷ ಹಾಕುವ ತರಗತಿ ಬಳಿ ಬಂದು ನೋಡುತ್ತಾರೆ,ಅಲ್ಲಿ..

 ಮುಂದುವರೆಯುವುದು

 ನಾಗಶ್ರೀ ಎಸ್ ಭಂಡಾರಿ
ಮೂಡುಬಿದಿರೆ

Comments

Popular posts from this blog

ಹೆಮ್ಮೆಯ ಭಂಡಾರಿ ಪ್ರತಿಭೆ : 4 - ಸಂದೀಪ್ ಭಂಡಾರಿ

ಸದಾಶಿವ. ಸಂಚಿಕೆ - 2

ಸದಾಶಿವ - ಸಂಚಿಕೆ-32