ಸದಾಶಿವ - ಸಂಚಿಗೆ-15

ಸದಾಶಿವ

ಸಂಚಿಗೆ-15

    ತಾವು ಯಾರೆಂದು ಮುತ್ತುಲಕ್ಷ್ಮಿ ಕೇಳಿದಾಗ, ನಾನು ಕೃಷ್ಣಪ್ಪನವರ ಸ್ನೇಹಿತ, ನಿಮ್ಮ ಸೊಸೆ ಸರಸಿ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಎಂದಾಗ ಮುತ್ತುಲಕ್ಷ್ಮಿಗೆ ಒಂದು ಕಡೆ ಸಂತಸವಾದರೂ! ಮಗದೊಂದು ಕಡೆ ಮಗ ಜಾರಿ ಬೀಳುವಂತಾಗಿದ್ದು ಈ ಮಗುವಿನ ಜನನದಿಂದ ಆಗಿರಬಹುದಾ ಎಂಬ ಶಂಕೆ ಕಾಡಿತು ,ಆದರೂ ಅದನ್ನು ಮುಖದಲ್ಲಿ ತೋರ್ಪಡಿಸಿಕೊಳ್ಳದೆ, ಬಂದ ಅತಿಥಿಯನ್ನು ಆದರಿಸಿ ಒಳ ಕರೆದು ಕೂರಿಸಿ ,ಚಹಾ ಮಾಡಿ ಕೊಟ್ಟರು. ಅಲ್ಲೇ ಸೋಫಾದಲ್ಲಿ ಕಾಲು ಚಾಚಿಕೊಂಡು ಕುಳಿತಿದ್ದ ರಾಯರನ್ನು ಕಂಡು ಏನಾಯಿತೆಂದು ಕೇಳಿದಾಗ ,ತೆಂಗಿನ ಮರದಿಂದ ಬಿದ್ದದ್ದನ್ನು ಹೇಳಿದರು ,ಹಾಗೆಯೇ ನೀವು ಬಂದ ಕಾರಣವೇನು ಎಂದು ಕೇಳಿದಾಗ ಸರಸಿಗೆ ಗಂಡು ಮಗುವಾಗಿರುವ ವಿಚಾರವನ್ನು ತಿಳಿಸಿದರು. ರಾಯರಿಗೆ ಈ ವಿಚಾರವನ್ನು ಕೇಳಿದಾಗ ಆದ ಸಂತಸ ಅಷ್ಟಿಷ್ಟಲ್ಲ, ತಾಯಿಯ ಬಳಿ ನಾನೀಗಲೇ ಕಡಬಕ್ಕೆ ಹೊರಡುತ್ತೇನೆ ಎಂದು ಎದ್ದು ನಿಲ್ಲಲು ಪ್ರಯತ್ನಿಸಿದಾಗ, ನೋವಿನಿಂದ ಸೋಫಾದ ಮೇಲೆ ಕುಸಿದು ಬಿದ್ದರು, ಮಗನು ನೋವಿನಿಂದ ನರಳುತ್ತಿರುವುದನ್ನು ಕಂಡು ತಾಯಿ ಹೃದಯಕ್ಕೆ ಸಹಿಸಲಾಗಲಿಲ್ಲ ಇಂದು ಕಡಬಕ್ಕೆ ಹೊರಡುವುದು ಬೇಡವೇಬೇಡ ನಾಳೆ ನಿನ್ನ ಕಾಲುನೋವು ವಾಸಿಯಾಗುತ್ತದೆ ನಾಳೆ ಹೊರಟರಾಯಿತು ಎಂದು ಹೇಳಿದಾಗ, ರಾಯರು ಅರೆಮನಸ್ಸಿನಿಂದಲೇ ತಲೆಯಾಡಿಸಿದರು. ಬಂದ ಸೋಮನಲ್ಲಿ ಮಗನ ಪರಿಸ್ಥಿತಿಯನ್ನು ಹೇಳಿ ನಾಳೆ ಮಗುವನ್ನು ನೋಡಲು ಬರುತ್ತೇವೆ ಎಂದು ಹೇಳಿ ಕಳುಹಿಸಿದರು ಕೃಷ್ಣಪ್ಪನವರ ಸ್ನೇಹಿತ ಸೋಮ  ರಾಯರ ಮನೆಯ ಆತಿಥ್ಯವನ್ನು ಸ್ವೀಕರಿಸಿ ,ಹೊರಟರು.
    ಸರಸಿ ಹೆರಿಗೆಯ ನಂತರ ತನ್ನ ಮಗನನ್ನು ಕಂಡು ಹಿಗ್ಗಿದಳು, ಹಾಲಿನಂತ ಮೈ ಬಣ್ಣ, ದಷ್ಟಪುಷ್ಟವಾದ ಕೈಕಾಲುಗಳು, ಮಿಂಚಿನಂಥ ಕಣ್ಣುಗಳೂ, ಹುಟ್ಟುತ್ತಲೇ ಹಣೆಯ ಮೇಲೊಂದು ಮಚ್ಚೆ ಇತ್ತು ,ಮಗುವಿನ ರೂಪ ಎಲ್ಲರ ಕಣ್ ಸೆಳೆಯುತ್ತಿತ್ತು ,ಸರಸಿ ಗಂಡನ ಬರುವಿಕೆಗಾಗಿ ಬಾಗಿಲ ಕಡೆಯೇ ನೋಡುತ್ತಿದ್ದಳು ,ಆದರೆ ತನ್ನ ಗಂಡ ಇಂದು ಬರುವುದಿಲ್ಲ ಕಾಲಿಗೆ ಏಟಾಗಿದೆ  ಎನ್ನುವ ವಿಚಾರವನ್ನು ಕೇಳಿ ಸರಸಿಗೆ ಅತೀವ ದುಃಖವಾಯಿತು. ಹೆರಿಗೆ ನೋವಿಗಿಂತಲೂ ,ಗಂಡ ಬರಲು ಸಾಧ್ಯವಾಗಲಿಲ್ಲ ಎನ್ನುವ ನೋವೇ ಅತಿಯಾಗಿ ಕಾಡಿತು,ತನ್ನ ಪತಿ  ಮಗುವನ್ನು ಕಂಡು ಹರುಷದಿಂದ ಮುದ್ದಾಡುವುದನ್ನು ಕಾಣಬೇಕೆಂಬ ಅವಳ ಆಸೆ ನಿರಾಸೆಯಾಯಿತು. ಆದರೂ ನಾಳೆ ಬರುವರಲ್ಲ ಎಂದು  ಸಮಾಧಾನ ಮಾಡಿಕೊಂಡು, ಹಸಿವಿನಿಂದ ಅಳುತ್ತಿದ್ದ ಪುಟ್ಟ ಪೋರನಿಗೆ ಹಾಲುಣಿಸಿತೊಡಗಿದಳು.
    ಇತ್ತ ಶ್ರೀಪತಿ ರಾಯರ ಮನೆಯಲ್ಲೂ ಗಡಿಬಿಡಿ  ವಾತಾವರಣ ,ಅವರ ಮಗ ಸುರೇಶನ ಪತ್ನಿಗೆ ಹೆರಿಗೆ ನೋವು ಶುರುವಾಗಿತ್ತು, ಮನೆಯವರೆಲ್ಲರ ಮುಖದಲ್ಲೂ ಆತಂಕವಿತ್ತು. ಅಂತೂ ಸುರೇಶನ ಪತ್ನಿ
ಪಂಕಜಾಳು ಹೆಣ್ಣು ಮಗುವಿಗೆ ಜನ್ಮವಿತ್ತಳು.ಮುದ್ದು
ಗೊಂಬೆಯಂತಿದ್ದ ಮಗುವನ್ನು ಎಲ್ಲರೂ ಕೊಂಡಾಡುತ್ತಿದ್ದರು, ದೇವರು ಯಾರ ಹಣೆ ಬರಹದಲ್ಲಿ ಏನನ್ನು ಬರೆದಿರುತ್ತಾನೋ,
ಮನುಷ್ಯ ಅಂದುಕೊಡಂತೆ ಏನೂ ಆಗುವುದಿಲ್ಲ.ಜೈನ ಧರ್ಮದ ಶ್ರೀಪತಿ ರಾಯರಿಗೂ,  ಬಂಟ ಜಾತಿಯ ರಾಮರಾಯರಿಗೂ  ತಂದೆ ಮಗನಂತೆ ಅವಿನಾಭಾವ ಸಂಬಂಧ. ಆ ನಂಟು ಮುಂದೆ ಬೆಸೆಯುವುದೋ ಅಥವಾ ಕಗ್ಗಂಟಾಗಿ ಯಾರ ಕೊರಳಿಗೆ ಉರುಳಾಗುವುದೋ ದೇವರೆ ಬಲ್ಲ..ಅವನಾಟದ ಕೀಲುಗೊಂಬೆಗಳು,ಅವವನಾಡಿಸಿದಂತೇ ಆಡಬೇಕು,ಇಂದು ಸಂತಸದ ಸಿಹಿ ನೀಡಿ,ಮುಂದೆ ಕಹಿಯ ರುಚಿಯನ್ನೂ ನೀಡದೆ ಬಿಡಲಾರ,ಎದುರಿಸುವಾತ ಬಲಹೀನನಾದರೆ ಸಾವು ನಿಶ್ಚಿತ.ಅದು  ವಿಧಿ ಲಿಖಿತ ಕೂಡಾ ಆಗಿರಬಹುದು..

 ಮುಂದುವರಿಯುವುದು

✍🏻 ನಾಗಶ್ರೀ.ಎಸ್.ಭಂಡಾರಿ
ಮೂಡುಬಿದಿರೆ

Comments

Popular posts from this blog

ಹೆಮ್ಮೆಯ ಭಂಡಾರಿ ಪ್ರತಿಭೆ : 4 - ಸಂದೀಪ್ ಭಂಡಾರಿ

ಸದಾಶಿವ. ಸಂಚಿಕೆ - 2

ಸದಾಶಿವ - ಸಂಚಿಕೆ-32