ಸದಾಶಿವ - ಸಂಚಿಕೆ- 13

ಸದಾಶಿವ

ಸಂಚಿಕೆ- 13
   
     ನಮ್ಮ ಸರಸಿಗೆ ಇಂದು ಸೀಮಂತವಾದುದರಿಂದ ಸೀಮಂತದ ಬಗ್ಗೆ ಒಂದೆರಡು ಮಾತನ್ನು ಹೇಳಬೇಕೆನಿಸುತ್ತಿದೆ, ಎನ್ಲಾ ರಾಮಣ್ಣ ಹೇಳ್ಲಾ ಎಂದು ರಾಮರಾಯರ ಒಪ್ಪಿಗೆಯನ್ನು  ಕೇಳಿದಾಗ ರಾಮರಾಯರು ಒಪ್ಪಿಗೆ ಇತ್ತರು.ಆಗ ಅಜ್ಜಿ ಸೀಮಂತ ಶಾಸ್ತ್ರದಂದು ಎಲ್ಲರೂ ಕೂಡಿ ಸಾನಾದಿಗೆಯಲ್ಲಿ ದೀಪ ಬೆಳಗಿಸಬೇಕು,ದೇವರಿಗೆ ಹೂವು ಹಾಕಿ, ಹುಡುಗಿಯ ಅತ್ತೆ ಇಲ್ಲವೇ ಹುಡುಗಿಯ ನಾದಿನಿ ಹರಿವಾಣದಲ್ಲಿ ಸೀಮಂತಕ್ಕೆ ತಂದ ಎರಡು ಸೀರೆ ,(ಒಂದು ಬೆಲೆಬಾಳುವಂತಹದ್ದು ಮತ್ತೊಂದು ಸಾಮಾನ್ಯ) ಸೀಮಂತಕ್ಕೆ ಮಾಡುವ ಚಿನ್ನಾಭರಣ, ಒಂದು ಅಟ್ಟೆ ಮಲ್ಲಿಗೆ, ತುಂಬು ಗರ್ಭಿಣಿಯಾದ ಹುಡುಗಿಗೆ ಒಳ್ಳೆಯ ರೀತಿಯಲ್ಲಿ ಹೆರಿಗೆ ಆಗಬೇಕೆಂದು ತಾಯಿ ಮಗು ಇಬ್ಬರೂ ಆರೋಗ್ಯವಾಗಿರಬೇಕೆಂದು ಮನೆಯ ದೈವಗಳಿಗೂ ಊರಿನ ದೇವರಿಗೂ ಏನಾದರೂ ಹರಕೆ ಹೇಳಬೇಕು, ಅತ್ತೆ ಹರಿವಾಣದಲ್ಲಿರುವ ಕುಂಕುಮವನ್ನು ಹೆಣ್ಣಿನ ಹಣೆಗೆ ಇಟ್ಟು, ಎಲೆಯಡಿಕೆಯನ್ನು ಅವಳ ಕೈಗೆ ಕೊಡಬೇಕು. (ಎಲೆಅಡಿಕೆ ಎಲ್ಲ ಕಾರ್ಯಕ್ರಮ ಆಗುವ ತನಕ ಅವಳ ಕೈಯಲ್ಲೇ ಇರಬೇಕು) ಹರಿವಾಣವನ್ನು ಹೆಣ್ಣಿನ ಕೈಗೆ ಕೊಡಬೇಕು ,ಅವಳು ಹರಿವಾಣವನ್ನು ಅವಳ ತಾಯಿ ಅಥವಾ ಸಂಬಂಧದವರ ಕೈಗೆ ಕೊಟ್ಟು ,ಅತ್ತೆಯ ಕಾಲಿಗೆ ನಮಸ್ಕರಿಸಬೇಕು. ಮಧ್ಯಾಹ್ನ ಹನ್ನೊಂದು, ಹನ್ನೆರಡು ಗಂಟೆಯ ಒಳಗೆ  ಹುಡುಗಿಯ ನಾದಿನಿ ಸರಸಿಯ ಕೈ  ಹಿಡಿದುಕೊಂಡು ಮೂಡು ದಿಕ್ಕಿಗೆ ಮುಖ ಮಾಡಿ, ಕುಳಿತುಕೊಳ್ಳುವಂತೆ ಹೇಳಬೇಕು  ಎದುರುಗಡೆ ಟಿಪಾಯಿ ಅಥವಾ ಮುಕ್ಕಳಿಕೆ ಇಟ್ಟಿರಬೇಕು. ದೊಡ್ಡ ಹರಿವಾಣದ ಮೇಲೆ ಎರಡು ಬಾಳೆ ಎಲೆಯನ್ನು ಹಾಕಿ ,ಸ್ವಲ್ಪ ನೀರಿನಿಂದ ಅದನ್ನ  ಸ್ವಚ್ಛ ಮಾಡಬೇಕು.ಬೇಯಿಸಿದ ಕೋಳಿ ಮೊಟ್ಟೆ ,ಸೊಪ್ಪಿನ ಪಲ್ಯ ಎಲೆಯ ಮುಂಭಾಗದಲ್ಲಿ ಬಡಿಸಬೇಕು.. ಹುರಿದ ಅಕ್ಕಿ ಪುಡಿ ,ಎಲೆಯ ಮಧ್ಯಭಾಗಕ್ಕೆ ಹಾಕಬೇಕು ಹುಡಿಅಕ್ಕಿ, ಅವಲಕ್ಕಿಯನ್ನು ಬೆರೆಸಿ ಅಕ್ಕಿ ಪುಡಿಯ ಮೇಲೆ ಹಾಕಿ, ಚಕ್ಕುಲಿ ,ಲಡ್ಡು, ಹೋಳಿಗೆ ಹೀಗೆ ನಾನಾ ಥರದ ಭಕ್ಷ್ಯಗಳನ್ನು ಅದರ ಸುತ್ತ ಎತ್ತರಕ್ಕೆ ಬರುವಂತೆ ಮಾಡಬೇಕು, ಪ್ರತಿಯೊಂದು ತರದ ತಿಂಡಿಗಳನ್ನು ಐದು ಇಲ್ಲವೇ ಏಳು ಅಥವಾ ಒಂಬತ್ತರ ಸಂಖ್ಯೆಯಲ್ಲಿ ಇಡಬೇಕು. ಎರಡು ತುಂಡು ಬೆಲ್ಲ ,ಒಂದು ಪನ್ನೆ ಬಾಳೆಹಣ್ಣು ,ಅದರ ಮೇಲೆ ಇಡಬೇಕು. ತುಪ್ಪ ತೆಗೆದುಕೊಂಡು ಚಮಚದಲ್ಲಿ ಐದು ಭಕ್ಷ್ಯಗಳ ಮೇಲೆ ಹಾಕಬೇಕು. ನಂತರ ಹುಡುಗಿಯ ಗಂಡನನ್ನು ಕರೆದು ಹೂ, ಸೀರೆ ಕೊಟ್ಟು ಹಿಂಗಾರವನ್ನು ತರಿಸಿ ಅದರ ಮಧ್ಯಭಾಗದ ಪಿಂಗಾರವನ್ನು ತೆಗೆದು, ಹುಡುಗಿಯ ಮುಡಿಗೆ ಅವಳ ಗಂಡ ಮುಡಿಸಬೇಕು. ಐದು ಜನ ಮುತ್ತೈದೆಯರನ್ನು ಕರೆದು ಆರತಿ ಬೆಳಗಿಸಬೇಕು.ನಂತರ ಮೊಟ್ಟೆ ಸೊಪ್ಪು,ಪಲ್ಯವನ್ನು ಸಣ್ಣ ಪುಟ್ಟ ಮಕ್ಕಳಿಗೆ ತಿನ್ನಿಸಬೇಕು ಎಂದು ಅಜ್ಜಿ ಹೇಳಿ ಮುಗಿಸಿದಾಗ ಸುತ್ತ ನಿಂತವರೆಲ್ಲಾ ಅಜ್ಜಿಯ ಸಂಪ್ರದಾಯಬದ್ಧ ನುಡಿಗೆ ಸಂತಸಪಟ್ಟರು. ರಾಮರಾಯರು ಅಜ್ಜಿ ಯಿಂದಲೇ ಸರಸಿಗೆ ಮಾಡಬೇಕಾದ ಸೀಮಂತದ ಕಾರ್ಯಕ್ರಮವನ್ನು ಶಾಸ್ತ್ರಬದ್ಧವಾಗಿ ಮಾಡಿದರು.. ಅಜ್ಜಿ ಸರಸಿಯನ್ನು ನೋಡುತ್ತಾ ಒಂದು ಶೋಭಾನೆ ಪದವನ್ನು ಹಾಡಿದರು.

ಮಲ್ಲಿಗೆಯೂ ಮುಡಿಯಲ್ಲಿ ಬಾಡದಿರಲಿ,
ಸಲ್ಲಲಿತ ಸೊಬಗನ್ನು ನೀಡುತ್ತಿರಲಿ,
ನಲ್ಲ ನಲ್ಲೆಯರಲ್ಲಿ ಉಲ್ಲಾಸ ತುಂಬಿರಲಿ.ಫುಲ್ಲವಿಸಿ ಪರಿಮಳ ಬೀರುತ್ತಿರಲಿ.

ಪ್ರೇಮಾನುರಾಗದಲಿ ತ್ಯಾಗದಲ್ಲಿ ,ಭೋಗದಲ್ಲಿ, ಸಾಮರಸ್ಯದ ಬದುಕು ಸಾಗುತ್ತಿರಲಿ ,
ನಿತ್ಯ ನೂತನವಾಗಿರಲಿ, ದಿವ್ಯ ಚೇತನವಾಗಿರಲಿ, ಜೀವನದಿ ಭಾವನದಿ ಹರಿಯುತ್ತಿರಲಿ..

ಸವಿ ಹರೆಯದಲ್ಲಿ ಸವಿದ ಸವಿಗನಸು ನನಸಾಗಿ ಸವಿಜೇನು ಜಿನ ಜಿನುಗಿ ಚಿಮ್ಮುತಿರಲಿ
ನವಿರಾದ ನಗೆಯಿರಲಿ ನಗೆಯ ಮಲ್ಲಿಗೆಯರಳಿ ಬಗೆಯ ಭಾವನೆಗಳು ಬೆಳಕು ತರಲಿ..

ಎಂದು ಅಜ್ಜಿ ಶೋಭಾನೆ ಪದ ಹಾಡಿದ ನಂತರ, ಸರಸಿಯನ್ನು ತಾಯಿ ಮನೆಗೆ ಕಳಿಸಿಕೊಡಬೇಕೆಂದು,  ದನ ಕರುಗಳು ಹಟ್ಟಿ ಸೇರುವ ಮುನ್ನ ಗರ್ಭಿಣಿಯನ್ನು ಮನೆಗೆ ಸೇರಿಸಬೇಕೆಂದು ಹೇಳಿದರು.ಅತ್ಯಂತ ವಿಜೃಂಭಣೆಯಿಂದ ಸರಸಿಯ ಸೀಮಂತ ಕಾರ್ಯಕ್ರಮ ನಡೆಯಿತು.ಬಂದವರಿಗೂ ಭರ್ಜರಿ ಊಟವಾಯಿತು..ಸರಸಿ ತಾಯಿ ಮನೆಗೆ ಹೊರಟಾಗ ರಾಯರು ಮನವು ಬೇಸರಗೊಂಡಿತು..ಅತ್ತೆಗೂ ಸೊಸೆಯಿಂದ ದೂರವಿರಬೇಕಲ್ಲ ಎಂಬ ನೋವು ಕಾಡಿತು.ಆದರೆ ಎಲ್ಲರೂ ಕಥೆಗೆ ನಿಜವಾದ ಅರ್ಥವನ್ನು ನೀಡುವ ಹೊಸ ಅತಿಥಿಯ ಆಗಮನಕ್ಕೆ ಕಾತರದಿಂದ ಕಾಯುತ್ತಿದ್ದರು..

 ಮುಂದುವರಿಯುವುದು..

 ನಾಗಶ್ರೀ.ಎಸ್.ಭಂಡಾರಿ ಮೂಡುಬಿದಿರೆ

Comments

Popular posts from this blog

ಹೆಮ್ಮೆಯ ಭಂಡಾರಿ ಪ್ರತಿಭೆ : 4 - ಸಂದೀಪ್ ಭಂಡಾರಿ

ಸದಾಶಿವ. ಸಂಚಿಕೆ - 2

ಸದಾಶಿವ - ಸಂಚಿಕೆ-32