ಸದಾಶಿವ - ಸಂಚಿಕೆ - 11

ಸದಾಶಿವ

ಸಂಚಿಕೆ - 11

      ಸರಸಿ ತಾಯಿಯನ್ನು ಅಪ್ಪಿಕೊಂಡು ಅಳತೊಡಗಿದಳು, ತಾಯಿಗೂ ದುಃಖವಾಯಿತು ,ಮಗಳ ಬೆನ್ನು ನೇವರಿಸುತ್ತಾ ಸ್ಪರ್ಶದಲ್ಲಿ ಸಮಾಧಾನ ಮಾಡಿದರು, ಇದನ್ನು ಕಂಡ ಸರಸಿಯ ತಂದೆ ಕಣ್ಣೀರು ಮಿಡಿದರು. ತಂದೆ ಎನ್ನುವವನು  ಹೃದಯವನ್ನು ಗಟ್ಟಿ ಮಾಡಿಕೊಂಡು,ಕಷ್ಟಗಳು ಬಂದಾಗ ಎದೆಗುಂದದೆ ಎದುರಿಸುವವನು ಎಂದು ಎಲ್ಲರೂ ಹೇಳುತ್ತಾರೆ. ಆದರೆ ಹೆತ್ತ ಮಗಳು ಮಗುವಾಗಿನಿಂದ ಮುದ್ದಾಗಿ ಬೆಳಸಿ ,ಅವಳ ವಿದ್ಯಾಭ್ಯಾಸಕ್ಕೆ ,ಅವಳ ಬೇಕು ಬೇಡಗಳನ್ನು ಕೇಳಿ ತಿಳಿದುಕೊಂಡು ಪ್ರೀತಿಯಿಂದ ಸಲಹುವ ತಂದೆ ಯಾವತ್ತೂ ಅಳುವುದಿಲ್ಲ ,ಆದರೆ ಮಗಳು ಮನೆ ಬಿಟ್ಟು ಪತಿಯ ಮನೆಗೆ ಹೊರಡುವಾಗ ಬೇಡವೆಂದರೂ ಕಣ್ಣಂಚಲ್ಲಿ ನೀರು ಬಂದೇ ಬರುತ್ತದೆ. ಸರಸಿ ಬಂದು ಕಾಲು ಹಿಡಿದಾಗ ಕೃಷ್ಣಪ್ಪನವರ ಕಣ್ಣಿಂದ ಕಣ್ಣೀರ  ಹನಿಯೊಂದು ಸರಸಿಯ ತಲೆಯ ಮೇಲೆ ಬಿದ್ದು ಆಶೀರ್ವಾದ ಮಾಡಿದವು..  ಸರಸಿಯ ತಂದೆ, ತಾಯಿಯ ಮಗಳ ಮೇಲಿನ ಒಲವನ್ನು ಕಂಡ ರಾಮರಾಯರು ಮಾವ "ನಾನು ನಿಮ್ಮ ಮಗಳನ್ನು ನೋವಾಗದಂತೆ ನೋಡಿಕೊಳ್ಳುತ್ತೇನೆ, ಅವಳು ಒಂಟಿ ಎಂಬ ಭಾವನೆ ಬಾರದಂತೆ ಅವಳ ಜೊತೆಯಾಗಿ ಸದಾ ನಾನಿರುತ್ತೇನೆ" ಎಂಬ ಭರವಸೆಯನ್ನು ನೀಡಿದರು. ಮನೆಯವರೆಲ್ಲರೂ ಹೊರಟು ನಿಂತರು, ಗಂಡಿನ ಮನೆಯವರಲ್ಲಿ ಒಂದಷ್ಟು ಜನ ಮನೆಯಲ್ಲೇ ಉಳಿದಿದ್ದರು ,ಉಳಿದ ನೆಂಟರೆಲ್ಲ ತಮ್ಮ ತಮ್ಮ ಮನೆಗೆ ತೆರಳಿದರು. ತನ್ನ ಮನೆಯವರು ಹೊರಟಾದ ಮೇಲೇ ಸರಸಿಯ ಮನವು ಖಾಲಿಯಾಯಿತು, ಸರಸಿಯ ಮನವನ್ನ ಅರಿತುಕೊಂಡ  ರಾಯರು ಅವಳ ಭುಜ ಬಳಸಿ ,ಎದೆಗೆ ಒರಗಿಸಿಕೊಂಡು ಸಮಾಧಾನ ಮಾಡಿದರು. ತಾಯಿ ಮುತ್ತು ಲಕ್ಷ್ಮಿಯೂ ಸೊಸೆಯನ್ನು ಪ್ರೀತಿಯಿಂದ ಬರಮಾಡಿಕೊಂಡರು, ತಾನು ಬಯಸಿದ ಹೆಣ್ಣನ್ನೇ ವರಿಸಿದ ಸಂತಸದಲ್ಲಿ ರಾಮರಾಯರು ತೇಲಾಡುತ್ತಿದ್ದರು, ಪತ್ನಿಯೊಂದಿಗೆ ಮಾತನಾಡಲು ಕಾತರಿಸುತ್ತಿದ್ದರು, ಆದರೆ ಎಲ್ಲಿ ಮನೆಯಲ್ಲಿರುವ ನೆಂಟರ ಮುಂದೆ ಹೆಂಡತಿ ಹಿಂದೆ ಹೋದರೆ ತಮಾಷೆ ಮಾಡುವರೋಎಂದು ಸುಮ್ಮನೆ ಅವರ ಜೊತೆ ಮಾತನಾಡುತ್ತಾ ಕುಳಿತರು ,ರಾತ್ರಿ ಎಂದಾಗುವುದೋ,
ಎಂದು ಚಡಪಡಿಸುತ್ತಿದ್ದರು. ನೆಂಟರ ಮುಂದೆ ಸರಸಿ ಅತ್ತೆಯ ಬಳಿ ಮಾತನಾಡುತ್ತಾ ತನ್ನ ಗಂಡನ ಬಗ್ಗೆ ತಿಳಿದುಕೊಳ್ಳುತ್ತಿದ್ದಳು, ಎಷ್ಟಾದರೂ ಹೆತ್ತ ಕರುಳು ಮಗನನ್ನು ಹೊಗಳುತ್ತಲೇ ಇದ್ದರು. ಅಂತೂ ಹಗಲು ಕಳೆದು ರಾತ್ರಿಯಾಯಿತು ಚಂದಿರನು ಬಾನಲ್ಲಿ
ತನ್ನವರೊಡಗೂಡಿ ಬೆಳಕನ್ನು ಚೆಲ್ಲುತ್ತಿದ್ದ, ನಕ್ಷತ್ರಗಳು ಚಂದ್ರನ ಸುತ್ತಲೂ ಮಿನುಗುತ್ತಾ ಬೆಳಕ ಚೆಲ್ಲುತ್ತಿತ್ತು. ಹುಣ್ಣಿಮೆ ಚಂದಿರನಂತೆ ಸರಸಿಯ ಮೊಗದಂದವೂ ಮಿನುಗುತ್ತಿತ್ತು. ಗಿಳಿಹಸಿರು ಬಣ್ಣದ ರೇಶಿಮೆ ಸೆರೆಯಲ್ಲಿ ಸರಸಿ ಅಪ್ಸರೆಯಂತೆ ಕಾಣುತ್ತಿದ್ದಳು, ಸರಸಿಯ ಬರವನ್ನೇ ಕಾಯುತ್ತಿದ್ದ ರಾಮರಾಯರಿಗೆ ಸರಸಿಯನ್ನು ಕಂಡು ಆಶ್ಚರ್ಯವಾಯಿತು. ಅದೆಷ್ಟೊಂದು ಸುಂದರವಾಗಿ  ಕಾಣುತ್ತಿದ್ದಳೆಂದರೆ ಅವಳನ್ನೆತ್ತಿ  ಕೆನ್ನೆಗೊಂದು ಮುತ್ತನ್ನು ಕೊಟ್ಟೇ ಬಿಟ್ಟರು. ಸರಸಿ ನಾಚಿ ನೀರಾಗಿ ಹೋದಳು, ಮನಸ್ಸುಗಳು ಒಂದಾಗಿ ಈರ್ವರಿಗೂ ಅಂದು ಮಧುರ ರಾತ್ರಿಯಾಯಿತು ,ಕಳ್ಳ ಚಂದಿರನು ಇದನ್ನು ನೋಡಲಾರೆ ಎನ್ನುವಂತೆ ಮರೆಯಾಗಿದ್ದ .ಜೋಡಿ ಹಕ್ಕಿಗಳ ತನುವು ಮನವು ಬೆರೆತು ಬಾಂಧವ್ಯದ ಕೊಂಡಿ ಗಟ್ಟಿಯಾಯಿತು. ಜೀವನದ ಪ್ರಮುಖ ತಿರುವುಗಳು ಒಬ್ಬೊಬ್ಬರ ಜೀವನದಲ್ಲಿ ಒಂದೊಂದು ಸಮಯದಲ್ಲಿ ಆಗುತ್ತದೆಯಂತೆ ಆ ತಿರುವು ಸರಸಿ ಮತ್ತು ರಾಮರಾಯರ ಜೀವನದಲ್ಲಿ ಮದುವೆಯಿಂದ ಪ್ರಾರಂಭವಾಯಿತು.

ಮುಂದುವರಿಯುವುದು..

✍🏻 ನಾಗಶ್ರೀ ಎಸ್ ಭಂಡಾರಿ
ಮೂಡಬಿದಿರೆ

Comments

Popular posts from this blog

ಹೆಮ್ಮೆಯ ಭಂಡಾರಿ ಪ್ರತಿಭೆ : 4 - ಸಂದೀಪ್ ಭಂಡಾರಿ

ಸದಾಶಿವ. ಸಂಚಿಕೆ - 2

ಸದಾಶಿವ - ಸಂಚಿಕೆ-32