ಸದಾಶಿವ - ಸಂಚಿಕೆ- 9

ಸದಾಶಿವ

ಸಂಚಿಕೆ- 9

        ದಡೂತಿ ದೇಹದ ಅಗಲವಾದ ಹಣೆಗೆ ಚಂದನದಿಂದ ಅಡ್ಡ ನಾಮವನ್ನು ಬಳಿದುಕೊಂಡು ಕುತ್ತಿಗೆಗೆ ದಪ್ಪದಾದ
ಚೈನ್, ಕೈಗೆ ಕಡಗವನ್ನು ಹಾಕಿಕೊಂಡು ಐವತ್ತರ ಹರೆಯದ ವ್ಯಕ್ತಿಯೊಬ್ಬರು ಕಾರಿನಿಂದಿಳಿದರು ಅವರನ್ನು ಕಂಡ  ರಾಮರಾಯರು ಸ್ವತಃ ತಾವೇ ಮುಂದೆ ಬಂದು ಆ ವ್ಯಕ್ತಿಯನ್ನು ಎದುರುಗೊಂಡರು. ಶ್ರೀಪತಿ ರಾಯರು ಆ ಊರಿನ ಗಣ್ಯ ವ್ಯಕ್ತಿಗಳಲ್ಲೊಬ್ಬರು ಜೈನ ಧರ್ಮೀಯರಾದ ಅವರು ಸುತ್ತ ಹಳ್ಳಿಯಲ್ಲಿ ಅತಿ ಹೆಚ್ಚು ಜಾಗವನ್ನು ಹೊಂದಿದ್ದು , ಗೇಣಿಗೆ ಜಾಗವನ್ನು ಬಿಟ್ಟುಕೊಟ್ಟಿದ್ದರು. ರಾಮ ರಾಯರ ಜಾಗದ ಧಣಿ ಕೂಡ ಅವರೇ ಆಗಿದ್ದರು. ಹೆಸರು ರಾಮರಾಯದ್ದಾಗಿದ್ದರೂ ಜಾಗದ ಮೊದಲ ಧಣಿ ಶ್ರೀಪತಿ ರಾಯರು ,ಜೈನ ಧರ್ಮದವರಾದ ಶ್ರೀಪತಿರಾಯರ  ಜಾಗದಲ್ಲಿ ನಂಬಿಕೊಂಡು ಬಂದ ದೈವಗಳಿಗೆ ಕುರಿ ಕೋಳಿ ಬಲಿ ಕೊಡುತ್ತಿರಲಿಲ್ಲ. ಹಾಗಾಗಿ  ರಾಯರು ಅದನ್ನೇ ಮುಂದುವರಿಸಿಕೊಂಡು ಬಂದಿದ್ದರು.ಶ್ರೀಪತಿ ರಾಯರು ಬಹಳ ಮೃದು ಸ್ವಭಾವದ ವ್ಯಕ್ತಿ ,ಕೂತು ತಿನ್ನುವಷ್ಟು ಆಸ್ತಿ ಪಾಸ್ತಿ ಇದ್ದರೂ ಸಹ, ಬೇಡಿ ಬಂದವರಿಗೆ ಸಹಾಯ ಮಾಡದೇ ಇರುತ್ತಿರಲಿಲ್ಲ.ಹಾಗೆ ರಾಮರಾಯರಲ್ಲಿ ಏನೋ ಅರಿಯದ ಪ್ರೀತಿ ಕೂಡ. ಶ್ರೀಪತಿ ರಾಯರನ್ನು ಆದರದಿಂದ ಬರಮಾಡಿಕೊಂಡು ಕುಳಿತುಕೊಳ್ಳಲು ಹೇಳಿ ಆಸನವನ್ನು ನೀಡಿ, ಎಳನೀರನ್ನು ಕೊಚ್ಚಿ
ತಾರೆಂದು  ಹಾಲಿನಲ್ಲಿ ಹೇಳಿ ಕಳಿಸಿದರು. ಜೈನ ಧರ್ಮದವರಾದ ಕಾರಣ ಇತರ ಜಾತಿಯವರ ಮನೆಯಲ್ಲಿ ಶ್ರೀಪಾದರಾಯರು ಆಹಾರವನ್ನು ಸೇವಿಸುತ್ತಿರಲಿಲ್ಲ .ಹಾಗೆ ಎಳನೀರನ್ನು ಕುಡಿದು, ಮದುಮಗನಿಗೆ ಹರಸಿ, ಊರವರ ಜೊತೆ ಮಾತನಾಡಿ ಹೊರಟು ನಿಂತ ಶ್ರೀಪತಿ ರಾಯರನ್ನು ಸ್ವತಃ ರಾಮರಾಯರೇ ಕಾರಿನವರೆಗೆ ಬಿಟ್ಟು ಬೀಳ್ಕೊಟ್ಟು..ನಾಳೆ ಮದುವೆಗೆ ತಪ್ಪದೇ ಬರಬೇಕೆಂದು ಆಹ್ವಾನಿಸಿದರು. ಮದರಂಗಿ ಶಾಸ್ತ್ರ  ಪೂರ್ಣಗೊಂಡು ಮರುದಿನ ಮದುವೆಯ ತಯಾರಿಯಲ್ಲಿ ಹೆಂಗಳೆಯರು ,ಗಂಡಸರು ತೊಡಗಿದರೆ ಸರಸಿ ಗೋರಂಟಿ ಹಚ್ಚಿದ ಕೈಗಳನ್ನೇ ನೋಡುತ್ತಾ  ನಾಳಿನ ಮದುವೆಯ ಕಲ್ಪನೆಯಲ್ಲಿ ಜಾರಿ ಹೋದಳು..ಮದುವೆಯೆಂಬ ಮೂರು ಗಂಟಿನ ನಂಟಿನಲ್ಲಿ ನಿನ್ನೆ , ಇಂದು, ನಾಳೆಗಳೊಂದಿಗೆ ಜೀವನದ ಬಂಡಿಯ ನಡೆಸುವ ಎರಡು ಜೀವಿಗಳು ಗಂಡು, ಹೆಣ್ಣು, ಅಲ್ಲಿ ಪ್ರೀತಿ, ಪ್ರೇಮ ,ಸ್ನೇಹ, ಕರುಣೆ, ವಾತ್ಸಲ್ಯ ,ನಂಬಿಕೆಯೇ, ಮುಂದಿರಬೇಕೇ ಹೊರತು ದ್ವೇಷ, ಅಸೂಯೆ, ಕೋಪ, ತಾಪ,ಅಪನಂಬಿಕೆಗಳಲ್ಲ.ಮುಂಜಾನೆಯಾಗುವುದನ್ನೇ ಕಾಯುತ್ತಿದ್ದ ಎರಡೂ ಮನೆಯವರು ಸಡಗರದಿಂದ ತಯಾರಿ ನಡೆಸುತ್ತಿದ್ದರು, ರಾಯರದ್ದು ಗುತ್ತಿನ ಮನೆಯಾದ್ದರಿಂದ ಬೇಕಾದಷ್ಟು ಜಾಗವಿದ್ದುದ್ದರಿಂದ ಮನೆ ಮುಂಭಾಗದಲ್ಲಿ ಚಪ್ಪರ ಹಾಕಿ ,ಭಟ್ಟರನ್ನು ಕರೆಸಿ ಮದುವೆ ಶಾಸ್ತ್ರ  ಮನೆಯಲ್ಲಿಯೇ ಮಾಡುವುದೆಂದು ನಿರ್ಧರಿಸಿದರು.. ಮನೆ ಮುಂದೆ ತೆಂಗಿನ ಗರಿಯಿಂದ ಹೆಣೆದ ಸುಂದರ ಚಪ್ಪರವಿತ್ತು,ಹೂವಿಂದ ಅಲಂಕಾರ ಮಾಡಿದ್ದರು. ಮನೆಯ ಹಿಂದುಗಡೆ ವಿಶಾಲವಾದ ಜಾಗವಿದ್ದದ್ದರಿಂದ ಅಲ್ಲಿಯೇ ಭರ್ಜರಿ ಭೋಜನದ ವ್ಯವಸ್ಥೆ ಮಾಡಿದ್ದರು.ಹುಡುಗಿಯ ಮನೆಯವರು
ಸರಸಿಯನ್ನು ಕೆಂಪು ಜರಿಯಂಚಿನ  ಸೀರೆಯನ್ನು ಉಡಿಸಿ, ಕೈಗಳಿಗೆ ಗಾಜಿನ ಬಳೆಯನ್ನು ಹಾಕಿ, ಹಣೆಗೆ ದೊಡ್ಡದಾದ
ಕುಂಕುಮವನ್ನಿಟ್ಟು ಕೈಗಳಿಗೆ ತೋಳಬಂದಿ, ಕುತ್ತಿಗೆಗೆ ಕಾಸಿನ ಸರ,ಮುತ್ತಿನ ಸರ, ಮಾವಿನ ಕಾಯಿ ಮಾಲೆಯನ್ನು  ಮದುಮಗಳಿಗೆ ತೊಡಿಸಿ ಕಣ್ಣಿಗೆ ಕಪ್ಪು ಕಾಡಿಗೆಯನ್ನು ಹಚ್ಚಿ, ಸಪೂರ ನಡುವಿಗೆ ಡಾಬನ್ನು ಹಾಕಿ, ನೆತ್ತಿಗೆ ಬೈತಲೆಯನ್ನಿಟ್ಟು, ಗಲ್ಲಕ್ಕೆ ದೃಷ್ಟಿ ಭೊಟ್ಟನಿಟ್ಟರು. ಬಿಳಿದಾದ ಕಾಲುಗಳಿಗೆ ಗೆಜ್ಜೆ ಹಾಕಿ ,ನೀಳಕೇಶ ರಾಶಿಗೆ ಮಲ್ಲಿಗೆ ಹೂವಿನ ಮೊಗ್ಗಿನ ಜಡೆಯನ್ನು ಸುತ್ತಿ, ದೃಷ್ಟಿ ತೆಗೆದರು. ಚಂದನದ ಬೊಂಬೆಯಂತೆ ಕಾಣುತ್ತಿದ್ದ  ಸರಸಿಯನ್ನು ನೋಡಲೆರಡು ಕಣ್ಣು ಸಾಲುತ್ತಿರಲಿಲ್ಲ ,ಅಷ್ಟರಲ್ಲಿ ಲಕ್ಷ್ಮಮ್ಮ ಸರಸರನೆ ಕೋಣೆಯೊಳಗೆ ಬಂದು..

 ಮುಂದುವರೆಯುವುದು

 ನಾಗಶ್ರೀ ಎಸ್ ಭಂಡಾರಿ
ಮೂಡುಬಿದಿರೆ

Comments

Popular posts from this blog

ಹೆಮ್ಮೆಯ ಭಂಡಾರಿ ಪ್ರತಿಭೆ : 4 - ಸಂದೀಪ್ ಭಂಡಾರಿ

ಸದಾಶಿವ. ಸಂಚಿಕೆ - 2

ಸದಾಶಿವ - ಸಂಚಿಕೆ-32