ಸದಾಶಿವ - ಸಂಚಿಕೆ - 5

ಸದಾಶಿವ

ಸಂಚಿಕೆ - 5

        ನಿನ್ನೆ ಜೈಲಿಗಟ್ಟಿದ ಕುಡುಕ ಬೆನ್ನ ಹಿಂದೆ ಚೂರಿ ಹಿಡಿದುಕೊಂಡು ನಿಂತಿದ್ದ.ರಾತ್ರಿಯೇ ಕುಡುಕ ಜೈಲಿನಿಂದ ತಪ್ಪಿಸಿಕೊಂಡು ಬಂದಿದ್ದ. ಸರಸಿಯನ್ನು ಕೊಲ್ಲುವುದೇ ಅವನ ಹಂಚಿಕೆಯಾಗಿತ್ತು .ಬೆಳಗ್ಗೆದ್ದು ಸರಸಿ ದೇವಸ್ಥಾನಕ್ಕೆ ಹೋಗುವುದನ್ನು ಕಂಡು ಅವಳನ್ನು ಹಿಂಬಾಲಿಸಿಕೊಂಡು ಬಂದಿದ್ದ .ಕುಡುಕನನ್ನು ಕಂಡು ಭಯಭೀತಳಾದ ಸರಸಿ ಓಡತೊಡಗಿದಳು, ದೇವಸ್ಥಾನದ ಹೊರಾಂಗಣಕ್ಕೆ ಬಂದ ಸರಸಿ ಹಿಂದಿರುಗಿ ನೋಡಿದಾಗ ಕಣ್ಣಮುಂದೆಯೇ ಕುಡುಕ ನಿಂತಿದ್ದ .ಇನ್ನೇನು ಹೊಟ್ಟೆಗೆ ಚೂರಿ ಹಾಕಬೇಕೆನ್ನುವನ್ನುವಷ್ಟರಲ್ಲಿ ರಾಮರಾಯರು ಕುಡುಕನ ಕೈಯನ್ನು ಹಿಡಿದೆತ್ತಿ ಹಿಂದೆ ತಳ್ಳಿದರು. ರಾಯರು ಕಟ್ಟುಮಸ್ತಾದ ಯುವಕ, ಬೆಳಿಗ್ಗೆಯೇ ಕುಡಿದಿದ್ದ ಕುಡುಕನಿಗೆ ರಾಯರೊಂದಿಗೆ ಸೆಣಸುವಷ್ಟು ಶಕ್ತಿ ಕೂಡ ಇರಲಿಲ್ಲ .ರಾಯರ ಒಂದೇ ಏಟಿಗೆ ನೋವಿನಿಂದ ಮುಲುಗುತ್ತಿದ್ದ. ಜೈಲಿನಿಂದ ತಪ್ಪಿಸಿಕೊಂಡ ಕುಡುಕನನ್ನು ಪೊಲೀಸರು ಊರಿಡೀ ಹುಡುಕಾಡಿ ದೇವಸ್ಥಾನದತ್ತ ಬಂದಿದ್ದರು.ಅಲ್ಲಿ ರಾಯರ ಕೈಯಿಂದ ಪೆಟ್ಟು ತಿಂದು ಮಲಗಿದ್ದ ಕುಡುಕನಿಗೆ ಲಾಠಿ ಏಟಿನ ರುಚಿಯನ್ನು ಕೂಡ ಪೊಲೀಸರು ತೋರಿಸಿದರು .ಇನ್ನು, ಈತನಿಗೆ ಬಿಗಿ ಬಂದೋಬಸ್ತ್ ಮಾಡಿ ಕಾಯುತ್ತೇವೆ, ಎಂದು ಸರಸಿಗೆ ಧೈರ್ಯವನ್ನು ನೀಡಿ ಹೊರಟರು..ಸರಸಿ ಇಂದು ರಾಯರನ್ನು ನೋಡಿ ಓಡಿ ಹೋಗಲಿಲ್ಲ. ಅರೆ ಬಿರಿದ ಮಲ್ಲಿಗೆಯು ಅರಳುವಂತೆ ಸುಂದರವಾದ ಮುಗುಳ್ನಗೆಯೊಂದಿಗೆ ರಾಯರಿಗೆ ಅಂದು ಕಾಪಾಡಿದ್ದಕ್ಕೆ ಮತ್ತು ಇಂದು ತನ್ನನ್ನು ರಕ್ಷಿಸಿದ್ದಕ್ಕೆ ಧನ್ಯವಾದವನ್ನು ತಿಳಿಸಿದಳು..

    ಆ ಮುಗುಳ್ನಗೆ ರಾಯರಿಗೆ ತನ್ನೆಲ್ಲಾ ಕನಸುಗಳು ನೆರವೇರಿದಂತೆ ಭಾಸವಾಯಿತು. ತಾವೇ ಮುಂದೆ  ಸರಸಿಯನ್ನು ಮಾತಿಗೆಳೆದರು,ಕುಡುಕ ಏಕೆ ನಿನ್ನನ್ನು ಕೊಲ್ಲಲು ಬಂದ ಎಂದು ಪ್ರಶ್ನಿಸಿದಾಗ, ಕುಡುಕನಿಂದ ತನಗಾದ ತೊಂದರೆಯನ್ನು ವಿವರಿಸಿದಳು..ಓಹೋ ಹಾಗ ವಿಷಯ ಎಂದ ರಾಯರು ದೇವಸ್ಥಾನದ ಜಗಲಿಯ ಮೇಲೆ ಕುಳಿತು ಕೊಳ್ಳೋಣ ಎಂದು
ಸರಸಿಯನ್ನು ಕೇಳಿದಾಗ ಯಾವುದೋ ಮಾಯೆಗೆ ಒಳಗಾದವಳಂತೆ ಅವರ ಜೊತೆ ಹೋಗಿ ಕುಳಿತುಕೊಂಡಳು.. ಅತಿ ಸಮೀಪದಿಂದ ಸರಸಿಯ ನೋಡಿದ ರಾಯರಿಗೆ ಸಂತಸದಿಂದ ಹೃದಯ ಹುಚ್ಚೆದ್ದು ಕುಣಿಯುತ್ತಿತ್ತು. ಕಪ್ಪು ಲಂಗದಧಾವಣಿಯಲ್ಲಿ ಅವಳು ತುಂಬಾ ಸುಂದರವಾಗಿ ಕಾಣುತ್ತಿದ್ದಳು.  ರಾಯರು ಯಾವುದೇ ಮುಚ್ಚುಮರೆ ಇಲ್ಲದೆ ನನ್ನನ್ನು ವಿವಾಹವಾಗುವೆಯಾ ಎಂದು ನೇರವಾಗಿ ಕೇಳಿದಾಗ ಸರಸಿ ನಾಚಿ ನೀರಾದಳು.. ಆದರೆ  ಕಣ್ಣುಗಳೇ ಒಪ್ಪಿಗೆಯನ್ನು ಸೂಚಿಸುತ್ತಿತ್ತು.ಅದನ್ನರಿತ ರಾಯರು ಸರಸಿಯ ನೀಳವಾದ ಬೆರಳುಗಳ ಅಂಗೈಯ್ಯನ್ನು ಹಿಡಿದುಕೊಂಡು ನಾನು ನಿನ್ನವನು ಎಂಬ  ಭರವಸೆಯಿಂದ  ಅದುಮಿದರು. ಈಗ ಸರಸಿ ಮಾತನಾಡುವ ಸಮಯ ಎಂದುಕೊಂಡು ನಾನು ಮಧ್ಯಮ ವರ್ಗದ ಹುಡುಗಿ ,ನಿಮ್ಮಂತ ಶ್ರೀಮಂತರಿಗೆ ತಕ್ಕವಳಲ್ಲ ಎಂದು ಹೇಳಿದ್ದರೂ ಬಾಯಲ್ಲಿ ಬಂದ ಮಾತಿಗೂ ಮುಖದ ಭಾವದಲ್ಲಡಗಿದ ಮಾತಿಗೂ ವ್ಯತ್ಯಾಸವನ್ನರಿತ ರಾಯರು  ನಾನು ಪ್ರೀತಿಸಿದ್ದು ನಿನ್ನಲ್ಲಿ  ಎಷ್ಟು ಹಣವಿದೆ ಎಂದು ನೋಡಯಲ್ಲ.ಪ್ರಥಮ ಭೇಟಿಯಲ್ಲೇ ನಿನ್ನಲ್ಲಿ ಪ್ರೇಮಾಂಕುರವಾಯಿತು. ನಿನ್ನ ಬಿಟ್ಟು ಬೇರಾರನ್ನೂ  ವಿವಾಹವಾಗುವ ಇಚ್ಛೆ ನನಗಿಲ್ಲ ಎಂದು ಸ್ಪಷ್ಟವಾಗಿ ಹೇಳಿ,  ಸರಸಿಯತ್ತ ನೋಡಿದಾಗ ಅವಳ ಕಣ್ಣುಗಳಲ್ಲಿ ಕಣ್ಣೀರು ಹರಿಯುತ್ತಿತ್ತು ಏಕೆಂದು ಕೇಳಿದಾಗ..

ಮುಂದುವರಿಯುವುದು...


ನಾಗಶ್ರೀ ಎಸ್ ಭಂಡಾರಿ
ಮೂಡುಬಿದಿರೆ

Comments

Popular posts from this blog

ಹೆಮ್ಮೆಯ ಭಂಡಾರಿ ಪ್ರತಿಭೆ : 4 - ಸಂದೀಪ್ ಭಂಡಾರಿ

ಸದಾಶಿವ. ಸಂಚಿಕೆ - 2

ಸದಾಶಿವ - ಸಂಚಿಕೆ-32