ಸದಾಶಿವ. ಸಂಚಿಕೆ - 4

ಸದಾಶಿವ

ಸಂಚಿಕೆ - 4

       ಇತ್ತೀಚೆಗೆ ಹಲವು ದಿನಗಳಿಂದ ಒಬ್ಬ ಕುಡುಕ ಸರಸಿಯನ್ನು ಮದುವೆಯಾಗೆಂದು ಪೀಡಿಸುತ್ತಾ ಹಿಂದೆ ಬಿದ್ದಿದ್ದ ,ಒಂದು ಸಾರಿ ಅವನ ಕೆನ್ನೆಗೆ ಬಾರಿಸಿದ್ದರೂ ಕೂಡ ಇಂದು ಮನೆಯವರೆಗೂ ಬಂದಿದ್ದಾನೆ, ಏಟು ತಿಂದರೂ ಇವನಿಗೆಷ್ಟು ಪೊಗರು ಎಂದು ಕೋಪದಿಂದ ಸರಸಿ ಅವನ ಕಡೆ ನೋಡಿ ಪೊಲೀಸ್ ಸ್ಟೇಷನ್ಗೆ ಕರೆ ಮಾಡಿ ,ಕುಡುಕನೊಬ್ಬ ಮನೆ ಹಿಂಬದಿಯಿಂದ ಬಂದು ತೊಂದರೆ ಕೊಡುತ್ತಿದ್ದಾನೆ ಎಂದು ದೂರು ನೀಡಿದಳು. ಅಷ್ಟರವರೆಗೆ ಆ ಕುಡುಕನನ್ನು ಹಿಡಿದಿಡಬೇಕು ಎಂದುಕೊಂಡು ಪಕ್ಕದ ಮನೆಯವರನ್ನು ಕರೆದುಕೊಂಡು ಬರಲು ತಾಯಿಗೆ ಹೇಳಿದಳು. ಕೆಲಸದ ನಿಮಿತ್ತ ಪಕ್ಕದೂರಿಗೆ ತೆರಳಿದ್ದ ಅವಳ ತಂದೆ ಮನೆಗೆ ಬಂದಿರಲಿಲ್ಲ , ಹಾಗಾಗಿ ಮನೆಯಲ್ಲಿ ಗಂಡಸರಿಲ್ಲ ವೆಂದು ಮನೆಗೆ ಬಂದಿದ್ದ ಕುಡುಕನಿಗೆ ಸರಸಿಯ ಬಗ್ಗೆ ಏನೂ ತಿಳಿದಿರಲಿಲ್ಲ, ನೋಡಲೆಷ್ಟು ಸುಂದರಿಯೋ ಅಷ್ಟೇ ಬುದ್ಧಿವಂತೆ ಕೂಡ. ಕುಡುಕನು ತಪ್ಪಿಸಿಕೊಳ್ಳಬಾರದೆಂದು ಮಾತಿನಲ್ಲಿ ಅವನ ಮೋಡಿ ಮಾಡಿ ,ನೆರೆ ಮನೆಯವರು ಬರುವ ತನಕ ನಿಲ್ಲಿಸಿಟ್ಟಿದ್ದಳು, ಪಕ್ಕದ ಮನೆಯವರು ಬಂದು ಅವನನ್ನು ಹಿಡಿದುಕೊಂಡು ಪೊಲೀಸಿನವರ ಕೈಗೆ ಬಿಟ್ಟುಬಿಟ್ಟರು..ಆ ಸಂದರ್ಭದಲ್ಲಿ ಕುಡುಕನ ಕಣ್ಣಲ್ಲಿ ಕಂಡ ದ್ವೇಷ ಮತ್ತು ಸೇಡಿನ ಕಿಡಿ ಸರಸಿಯನ್ನು ಒಂದು ಕ್ಷಣ ವಿಚಲಿತಳನ್ನಾಗಿಸಿತು. ಪೊಲೀಸರು ಕುಡುಕನನ್ನು ಸ್ಟೇಷನ್ಗೆ ಕರೆದುಕೊಂಡು ಹೋದರು. ನೆರೆಮನೆಯವರಿಗೆ ಧನ್ಯವಾದ ತಿಳಿಸಿ ಮನೆಯ ಒಳಗೆ ಬಂದ ಸರಸಿ ಮತ್ತು ಲಕ್ಷ್ಮಮ್ಮನಿಗೆ ಭಯ ಕಾಡತೊಡಗಿತು ಮುಂದೆ ಜೈಲಿನಿಂದ ಬಿಡುಗಡೆಯಾಗಿ ಬಂದ ಕುಡುಕ ಏನಾದರೂ ಮಾಡಿದರೆ ಎಂಬುವುದಾಗಿ ..ಸದ್ಯದ ಮಟ್ಟಿಗೆ ನಿರಾಳವಾಗಿ ರೋಣ ಎಂದು ಮನಸಿಗೆ  ಸಮಾಧಾನ ಮಾಡಿಕೊಂಡರು ತಮ್ಮ ತಮ್ಮೊಳಗೆ. ಅಂದಿನ ರಾತ್ರಿ ಕಳೆದು ಬೆಳಗಾಯಿತು..
          ಮನೆಯ ಮುಂದಣ ಹಸಿರು ಗದ್ದೆಯಲ್ಲಿ ಆಗ ತಾನೇ ಭತ್ತದ ಪೈರು ತಲೆ ಎತ್ತಿ ನಿಂತು ,ಹಸಿರ ಹೊದಿಕೆಯಿಂದ ನಳನಳಿಸುತ್ತಿತ್ತು. ಬೆಳ್ಳಕ್ಕಿಗಳು ಬೆಳ್ಳನೆ ಮೈ ಬಣ್ಣದಿಂದ ಅಲ್ಲಲ್ಲಿ ಕಟ್ಟಿದ್ದ ದನಗಳ ಮೇಲೆ ಕುಳಿತು ಸುತ್ತಲೂ ವೀಕ್ಷಿಸುತ್ತಿತ್ತು .ಇರುವೆಗಳ ಹಿಂಡೊಂದು ಮುಂಜಾನೆಯೇ ಬೀಳುತ್ತಿದ್ದ ಹನಿ ಮಳೆಯಿಂದ ರಕ್ಷಿಸಿಕೊಳ್ಳಲು ಸಾಲಾಗಿ, ವೇಗವಾಗಿ ,ಬೆಚ್ಚಗಿರುವ ಜಾಗವನ್ನರಸಿ ಶಿಸ್ತಿನ ಸಿಪಾಯಿಗಳಂತೆ ಚಲಿಸುತ್ತಿದ್ದವು .ಸರಸಿಯ ತಂದೆ ಪಕ್ಕ ದೂರಿನಲ್ಲಿ ಕೆಲಸವನ್ನು ಮುಗಿಸಿ ಗದ್ದೆಯ ಇಕ್ಕೆಲಗಳಲ್ಲಿರುವ ಜಾಗದಲ್ಲಿ ವಾಲಾಡುತ್ತಾ ಮನೆ ಕಡೆ ಬರುತ್ತಿದ್ದದ್ದನ್ನು ಕಂಡ
ಸರಸಿ ಅಪ್ಪನ ಕೈಯಲ್ಲಿದ್ದ ತರಕಾರಿ, ತಿಂಡಿಗಳ ಚೀಲವನ್ನು ತೆಗೆದುಕೊಳ್ಳಲು ಮುಂದೆ ಬಂದಳು .ಮಗಳ ಮುಖವನ್ನು ಕಂಡ ತಕ್ಷಣ ತಂದೆಯ ಮುಖ ಹರುಷದಿಂದ ಊರಗಲವಾಯಿತು.
ಮಗಳ ಹೆಗಲ ಮೇಲೆ ಕೈ ಹಾಕಿ ಮನೆ ಒಳಗೆ ನಡೆದರು ಹೆಂಡತಿಯಲ್ಲಿ ಉಪಹಾರವನ್ನು ತಯಾರಿಸಲು ಹೇಳಿ ಸ್ನಾನದ ಕೋಣೆಗೆ ಹೋದರು. ತಂದೆಗೆ ಸ್ನಾನಕ್ಕೆ ನೀರು,ಬಟ್ಟೆ ರೆಡಿಮಾಡಿ ಕೊಟ್ಟು ಬಂದ ಸರಸಿ ತಾನು ದೇವಸ್ಥಾನದ ಕಡೆ ಹೋಗಿ ಬರುತ್ತೇನೆಂದು ಹೇಳಿ ,ತನ್ನ ಕೋಣೆಗೆ ಬಂದು, ಎಂದಿಗಿಂತ ಹೆಚ್ಚು ಹರುಷದಿಂದ ಕಡು ಕಪ್ಪು ಬಣ್ಣದ ಲಂಗದಾವಣಿಯನ್ನ ಧರಿಸಿ, ಎರಡು ಜಡೆ ಹೆಣೆದು ,ಹಿಂದಿನ ದಿನ ಕಟ್ಟಿ ಇಟ್ಟಿದ್ದ ಮಲ್ಲಿಗೆಯನ್ನು ಮುಡಿದು, ದೇವರಿಗೆ ಅರ್ಪಿಸಲು ಹಣ್ಣು ಕಾಯಿ ಬುಟ್ಟಿಯನ್ನು ಹಿಡಿದುಕೊಂಡು ಹೊರಟಳು. ಇತ್ತ ರಾಯರು ಬೆಳಗಾಗುವುದನ್ನೇ ಕಾಯುತ್ತಿದ್ದವರಂತೆ ಚೆನ್ನಾಗಿ ತಯಾರಾಗಿ, ಪಕ್ಕದೂರಿಗೆ ಹೋಗಿ ಬರುತ್ತೇನೆಂದು ತಾಯಿಗೆ ತಿಳಿಸಿ ತಮ್ಮದೇ ಕಾರಿನಲ್ಲಿ ಹೊರಟು ನಿಂತರು. ನಿನ್ನೆ ತಾನೇ ಪಕ್ಕದೂರಿಗೆ ಹೋದವ ಇಂದು ಕೂಡ ಏಕೆ ಹೋದ ಎಂದು ತಾಯಿ ಯೋಚಿಸುತ್ತಿದ್ದಳು. ದೇವಸ್ಥಾನಕ್ಕೆ ಬಂದ ಸರಸಿ ದೇವರಿಗೆ ಹಣ್ಣುಕಾಯಿ ಅರ್ಪಿಸಿ, ಸುತ್ತಲೂ ನೋಡುತ್ತಿದ್ದಳು ದೇವರೊಬ್ಬರನ್ನು ಬಿಟ್ಟು, ಅಷ್ಟರಲ್ಲಿ...

ಮುಂದುವರಿಯುವುದು

 ನಾಗಶ್ರೀ.ಎಸ್ ಭಂಡಾರಿ
ಮೂಡುಬಿದಿರೆ

Comments

Popular posts from this blog

ಹೆಮ್ಮೆಯ ಭಂಡಾರಿ ಪ್ರತಿಭೆ : 4 - ಸಂದೀಪ್ ಭಂಡಾರಿ

ಸದಾಶಿವ. ಸಂಚಿಕೆ - 2

ಸದಾಶಿವ - ಸಂಚಿಕೆ-32