ಸದಾಶಿವ - ಸಂಚಿಕೆ - 10

ಸದಾಶಿವ

ಸಂಚಿಕೆ - 10

      ಮಗಳನ್ನು ಕಂಡು ಆಶ್ಚರ್ಯಚಕಿತರಾಗಿ ಹೇಳಲು ಬಂದ ವಿಷಯವನ್ನೇ ಮರೆತು, ಮುದ್ದಾಗಿ ಕಾಣುತ್ತಿದ್ದ ಮಗಳಿಗೆ ನೆಟಿಕೆ ಮುರಿದು ,ಟ್ಯಾಕ್ಸಿ ಬಂದಿದೆ ಬೇಗ ತಯಾರಾಗಿ ಎಂದು ಅವಸರಿಸಿದರು. ಮದುಮಗಳನ್ನು ಕರೆದುಕೊಂಡು ಹೋಗಲು ಟ್ಯಾಕ್ಸಿ ತಯಾರಾಗಿ ನಿಂತಿತ್ತು, ಉಳಿದವರು ಟೆಂಪೋದಲ್ಲಿ ಬರುವುದಾಗಿ ಹೇಳಿದರು..ಸರಸಿ  ಮೊದಲು ದೇವರಿಗೆ ಕೈಮುಗಿದು ,ಮನೆಯ ಹಿರಿಯರ ಕಾಲಿಗೆರಗಿ  ಕಾರಿನಲ್ಲಿ ಕುಳಿತುಕೊಂಡಳು. ಇತ್ತ ಗಂಡಿನ ಮನೆಯಲ್ಲಿ ಹೆಣ್ಣಿನ ಕಡೆಯವರ ಬರುವಿಕೆಯನ್ನೇ ಕಾಯುತ್ತಿದ್ದವರಂತೆ ಟ್ಯಾಕ್ಸಿಯಿಂದಿಳಿದ ಮದುಮಗಳನ್ನ ಮತ್ತು ಮನೆಯವರನ್ನ ಆದರದಿಂದ ಬರಮಾಡಿಕೊಂಡು  ಅಲಂಕಾರಗೊಂಡ ಚಪ್ಪರದೊಳಗಿನ ಹೋಮಕುಂಡದ ಎದುರು ಗಂಡು ಮತ್ತು ಹೆಣ್ಣನ್ನು ಕೂರಿಸಿದರು. ವಿವಾಹ ಕಾರ್ಯ ನೆರವೇರಿಸಿಕೊಡಲು ಊರಿನ ಗುರಿಕಾರ ಬಂದಿದ್ದರು.ತಮಗೆ ಬೇಕಾದ ವಸ್ತುಗಳನ್ನು ತಾವೇ ತರಿಸಿಕೊಂಡು ವಿವಾಹದ ಮಹತ್ವವನ್ನು ಹೇಳುತ್ತಾ 'ಸಮರಸ ಜೀವನದ ಆರಂಭವೇ ಮದುವೆ'  ಜೊತೆಗಾರ  ಮತ್ತು ಜೊತೆಗಾತಿಯ ಆಯ್ಕೆಗೆ ಮದುವೆ ಎನ್ನುತ್ತಾರೆ.ಸಾಮಾಜಿಕ ಮನ್ನಣೆ ಪಡೆದುಕೊಂಡಿರುವ ಪವಿತ್ರ ಅಡಿಪಾಯ, ಪ್ರತಿಯೊಬ್ಬರ ಬದುಕಿನಲ್ಲಿ ಮದುವೆ ಎನ್ನುವುದು ಮಧುರ ಕ್ಷಣ ಆಧ್ಯಾತ್ಮಿಕವಾಗಿ ಮನುಷ್ಯ ಜೀವನದ ಮುಖ್ಯ  ಪುರುಷಾರ್ಥಗಳಾದ ಧರ್ಮ, ಅರ್ಥ ,ಕಾಮ, ಮೋಕ್ಷಗಳನ್ನು ಗುರುತಿಸಲಾಗಿದೆ. ಇವುಗಳಲ್ಲಿ ಧರ್ಮವೆಂಬ ಚೌಕಟ್ಟಿನಲ್ಲಿ
ಅರ್ಥವೆಂಬ
ವ್ಯವಸ್ಥೆಯನ್ನಿಟ್ಟು ,ಕಾಮ ಎಂಬ ಪುರುಷಾರ್ಥವನ್ನು ನಾಶಗೊಳಿಸಿ ನಿಧಾನವಾಗಿ  ಮೋಕ್ಷವೆಂಬ ಪುರುಷಾರ್ಥದ ಕಡೆಗೆ ಹೋಗಲು ವಿವಾಹವೆಂಬ ಸಂಸ್ಕಾರ ಜಾರಿಯಲ್ಲಿದೆ ಈ ವಿಚಾರ ಹೆಚ್ಚಿನವರಿಗೆ ತಿಳಿದಿಲ್ಲ,ಹಾಗೆ ಹೆಣ್ಣಿಗೆ ಹಣೆಯ  ಸಿಂಧೂರ, ಕೊರಳಿನ ಮಾಂಗಲ್ಯ, ಕೈಯಲ್ಲಿರುವ ಬಳೆಗಳು, ಗಜದಳತೆಯ ಸೀರೆ ಹೆಣ್ಣನ್ನು ಪರಿಪೂರ್ಣತೆ ಮೂರ್ತಿಯಾಗಿ ಬಿಂಬಿಸುತ್ತದೆ ..ಹೀಗೆ ಗುರಿಕಾರನ ಮಾತನ್ನು ಕೇಳುತ್ತಾ  ರಾಯರು ಮುದ್ದು ಗೊಂಬೆ ಸರಸಿಯ ಕಡೆ ಕಳ್ಳ ನೋಟವನ್ನು ಬೀರುತ್ತಿದ್ದರು, ಧೋತಿ ಮತ್ತು ಶರ್ಟು ಹಾಕಿಕೊಂಡು ,ಪೇಟವನ್ನು ಧರಿಸಿ ಸುಂದರವಾಗಿ ಕಾಣುತ್ತಿದ್ದ ರಾಯರನ್ನ ಸರಸಿ ಕಣ್ತುಂಬಿಕೊಳ್ಳುತ್ತಿದ್ದಳು. ಮಾಂಗಲ್ಯ ಧಾರಣೆಯ ವಿಧಿವಿಧಾನದ ನಂತರ ಒಂದು ಮಾತನ್ನು ಪುನರುಚ್ಚಿಸಲು ಗುರಿಕಾರರು ಹೇಳಿದರು ನಾವೀಗ ಒಟ್ಟಾಗಿ ಈ ಪ್ರಮಾಣ ಮಾಡೋಣ, 'ನಾವು ಪ್ರೀತಿ ,ಆಹಾರ, ನಮ್ಮ ಬಲ ಮತ್ತು ಸಮ ರುಚಿಯನ್ನು ಒಟ್ಟಾಗಿ ಸಮಾನವಾಗಿ ಹೊಂದಲು ನಮ್ಮಿಬ್ಬರ ಮನಸ್ಸು ಒಂದೇ ಇರಲಿ, ನಮ್ಮ ಪ್ರತಿಜ್ಞೆಯನ್ನು ನಾವು ಒಟ್ಟಾಗಿ  ನೆರವೇರಿಸೋಣ ,ನಾನು ಮೇಲಿನ ಲೋಕವಾದರೆ ನೀನು ಭೂಮಿ, ಮುಂದಾಗ ಹೊಂದಾಣಿಕೆಯಿಂದ  ಒಟ್ಟಾಗಿರೋಣ ಮತ್ತು ಮಕ್ಕಳನ್ನು ಪಡೆಯೋಣ, ಅಲ್ಲದೇ ಇನ್ನುಳಿದ ಸಂಪತ್ತಿಗೂ ಪಾಲುದಾರರಾಗಿರೋಣ ಎಂದು ,ಈ ಮಾತನ್ನು ಉಚ್ಚರಿಸುವಾಗ ಸರಸಿ ಮತ್ತು ರಾಯರ ಮನಸ್ಸಿನಲ್ಲಿ ಒಬ್ಬರಿಗೊಬ್ಬರ ಮೇಲಿನ ಪ್ರೇಮ ಇಮ್ಮಡಿಸಿತ್ತು. ವಿವಾಹದ  ವಿಧಿವಿಧಾನಗಳನ್ನು ಗುರಿಕಾರ ಸಂಪೂರ್ಣವಾಗಿ ನೆರವೇರಿಸಿ, ಜೋಡಿಹಕ್ಕಿಗಳ ಪ್ರೇಮ ಬಂಧನವನ್ನು ಇನ್ನಷ್ಟು ಬಿಗಿಗೊಳಿಸಿದರು.  ನವವಿವಾಹಿತರು  ಮನೆಯ ಹಿರಿಯರೆಲ್ಲರ ಕಾಲಿಗೆ ಬಿದ್ದು ಆಶೀರ್ವಾದವನ್ನು ಪಡೆದುಕೊಂಡು.ಶ್ರೀಪತಿ ರಾಯರ ಬಳಿ ತೆರಳಿ ಕಾಲಿಗೆ ಬಿದ್ದಾಗ ನೂರ್ಕಾಲ ಸುಖವಾಗಿ ಬಾಳಿರೆಂದು ಆಶೀರ್ವದಿಸಿದರು.. ಶ್ರೀಮಂತರಾದ ರಾಯರು ಮದುವೆಯ ಭೋಜನವನ್ನು ಭರ್ಜರಿಯಾಗಿ ನಡೆಸಿದ್ದರು, ಎರಡು ಮೂರು ಬಗೆಯ ಪಲ್ಯ,ಸಾಂಬಾರ್ ,ಸಿಹಿ ತಿಂಡಿ ,ಹೀಗೆ ಹಲವು ಬಗೆಯ ಖಾದ್ಯಗಳಿಂದ ಊಟ ಭರ್ಜರಿಯಾಗಿತ್ತು.ಬಂದವರೆಲ್ಲಾ ರಾಯರನ್ನು ಹೊಗಳಿ ಹೊರಟರು.  ಮದುವೆಯ ಸಮಾರಂಭ ಮುಗಿದು ಹೆಣ್ಣಿನ ಮನೆಯವರು ಕೂಡ ಹೊರಟು ನಿಂತರು. ಆಗ..

 ಮುಂದುವರಿಯುವುದು..

ನಾಗಶ್ರೀ ಎಸ್ ಭಂಡಾರಿ
ಮೂಡುಬಿದಿರೆ




Comments

Popular posts from this blog

ಹೆಮ್ಮೆಯ ಭಂಡಾರಿ ಪ್ರತಿಭೆ : 4 - ಸಂದೀಪ್ ಭಂಡಾರಿ

ಸದಾಶಿವ. ಸಂಚಿಕೆ - 2

ಸದಾಶಿವ - ಸಂಚಿಕೆ-32