ಸದಾಶಿವ - ಸಂಚಿಕೆ - 1

ಸದಾಶಿವ
 ●ಸಂಚಿಕೆ - 1

ಸಹೃದಯ ಓದುಗರಾದ ನಿಮ್ಮ ಬೆಂಬಲದ ನಿರೀಕ್ಷೆಯಲ್ಲಿ ನಾಗಶ್ರೀ.ಎಸ್.ಭಂಡಾರಿ.

   ಅದೊಂದು ಗುತ್ತಿನ ಮನೆ, ಮನೆ ತುಂಬಾ ಜನ.  ರಾಮರಾಯರು ಆ ಮನೆಯ ಹಿರಿಯ ವ್ಯಕ್ತಿ ,ಅವರಿಗೆ ಹನ್ನೆರಡು ಜನ ಮಕ್ಕಳು, ಸರಸ ಅವರ ಮುದ್ದಿನ ಹೆಂಡತಿ. ಸಾಲೆತ್ತೂರಿನ ಹಳ್ಳಿಯಲ್ಲಿ ರಾಮರಾಯರದ್ದೇ ಅತಿ ದೊಡ್ಡ ಮನೆ ,ದೊಡ್ಡ ಕೋಣೆ ಇರುವ ವಿಶಾಲವಾದ ಹಜಾರ, ಆಲದ ಮತ್ತು ಹೆಬ್ಬಲಸಿನ ಮರದ ಕಂಬ, ಕಮಾನುಗಳು, ಸುಂದರ ಶಿಲ್ಪ ಕಲೆಯ ಹಿರಿದಾದ  ಹೆಬ್ಬಾಗಿಲು, ಮನೆಯ ನಡುವಿನಲ್ಲಿ ಸ್ನಾನದ ತೊಟ್ಟಿ,ಹದಿನಾರು ಕೋಣೆಗಳಿರುವ ಅಂದಿನ ಕಾಲದಲ್ಲೇ ಆಧುನಿಕ ವಸ್ತುಗಳನ್ನು ಬಳಕೆ ಮಾಡುತ್ತಿದ್ದ ಮನೆ ಎಂದರೆ ಅದು ರಾಮರಾಯರದ್ದು. ರಾಮರಾಯರು ಊರಿಗೆ ದೊಡ್ಡ ವ್ಯಕ್ತಿ ಪಂಚಾಯಿತಿ ಅಧ್ಯಕ್ಷರಾಗಿದ್ದ ರಾಮ ರಾಯರೆಂದರೆ ಎಲ್ಲರಿಗೂ ಆದರ, ಗೌರವ ,ಆದರೆ ಕೆಟ್ಟವರನ್ನು ಎಂದು ಸಹಿಸರು ,ಅವರೆಷ್ಟೇ ದೊಡ್ಡ ವ್ಯಕ್ತಿಗಳಾದರೂ ತಪ್ಪು ಮಾಡಿದರೆ  ಶಿಕ್ಷಿಸದೆ ಬಿಡುತ್ತಿರಲಿಲ್ಲ, ಹೀಗೆ ಆ ಊರಿನ ಪ್ರಮುಖ ವ್ಯಕ್ತಿಯೊಬ್ಬರು ಬಡವನಿಗೊಬ್ಬನಿಗೆ ವಿನಾಕಾರಣ  ಹೀನಾಯವಾಗಿ ಬೈದು,ಹೊಡೆದು ಹೊರಗಟ್ಟಿದಾಗ ಆ ಪ್ರಮುಖ ವ್ಯಕ್ತಿಯನ್ನು ತರಾಟೆಗೆ ತೆಗೆದುಕೊಂಡು ಆ ಬಡವನಲ್ಲಿ ಕ್ಷಮೆ ಕೇಳಿಸಿದ್ದ  ಸಹೃದಯ ಮನದ ವ್ಯಕ್ತಿ ರಾಮರಾಯರು.

   ರಾಮರಾಯರ ಪತ್ನಿ ಸುಶೀಲೆ,ಗುಣವಂತೆ, ಹನ್ನೆರಡು ಮಕ್ಕಳನ್ನು ಹೂವಂತೆ ಸಾಕಿದ ಮಹಾತಾಯಿ ,ಸರಸಮ್ಮ ಮದುವೆಗಿಂತ ಮೊದಲು ಎಷ್ಟು ಸುಂದರವಾಗಿದ್ದ ರೆಂದರೆ ಇತರ  ಜಾತಿಯ ಪುರುಷರು ಕೂಡ ಇವರನ್ನು ಮದುವೆಯಾಗಲು ಹಾತೊರೆಯುತ್ತಿದ್ದರು. ಸರಸಿಯದು ಸುಂದರ ನೀಳ ಕೇಶರಾಶಿ  ಆ ಕೇಶ ರಾಶಿಯನ್ನು ಕಂಡು ಊರಿನ ಹುಡುಗಿಯರೆಲ್ಲ ನಾಗವೇಣಿ ಎಂದು ಚುಡಾಯಿಸುತ್ತಿದ್ದರು. ಅರಳು ಕಂಗಳ ನೀಳನಾಸಿಕದ,ಬಾಗಿದ ಕಾಮನಬಿಲ್ಲಿನಂಥ ಹುಬ್ಬಿನ ಚಂಚಲೆ ಸುಂದರಿ ಸರಸಿ.. ಮಾತಂತು ಅರಳು ಹುರಿದಂತೆ ,ಮಾತಿನಲ್ಲೇ ಮರಳು ಮಾಡಿಬಿಡುವ ಚತುರೆ, ಅಷ್ಟೇ ಜೋರು ಕೂಡ ,ಅವಳ ಬಾಯಿಗೆ ಸಿಕ್ಕ ಗಂಡಸರು ಮತ್ತೆ ಅವಳ ಬಳಿ ಸುಳಿಯಲಾರರು, ಕಾಮುಕರಿಗೆ ಅವಳು ಸಿಂಹಿಣಿ.

   ಹೀಗೆ ಒಂದು ದಿನ ರಾಮರಾಯರು ಸಾಲೆತ್ತೂರಿನಿಂದ  ಸರಸಿಯ ಊರಾದ ಕಡಬಕ್ಕೆ ಬಂದಿದ್ದರು. ನದಿಯ ತೀರದ ಬಳಿಯೊಂದು ಈಶ್ವರನ ಸನ್ನಿಧಾನಕ್ಕೆ ಪೂಜೆ ಮಾಡಿಸಲೆಂದು ಆಗಮಿಸಿದ್ದರು.ಪೂಜೆ ಮುಗಿಸಿ  ದೇವಸ್ಥಾನದ ಕೆರೆಯ ಬಳಿ ಬಂದಾಗ ಬಟ್ಟೆ ಒಗೆಯುತ್ತಾ  ಸ್ನೇಹಿತೆಯರ  ಜೊತೆ ತಮಾಷೆ ಮಾಡಿ ಮಾತನಾಡುತ್ತ ,ನಗುತ್ತಿದ್ದ ಸರಸಿಯನ್ನ ಕಂಡ ರಾಮ ರಾಯರ ಎದೆಯಲ್ಲಿ ಒಲವಿನ ಹೂವು ಅರಳಿತ್ತು .ಬಟ್ಟೆ ಒಗೆಯುತ್ತಿದ್ದ  ಸರಸಮ್ಮನ ಹಣೆಯಲ್ಲಿ ಬೆವರು ಮುತ್ತಿನ ಹನಿಗಳಂತೆ ಸಾಲಾಗಿ ನಿಂತು, ವಜ್ರದ ಮೂಗುತಿಯ ನತ್ತು  ಸೂರ್ಯನ ಬಿಸಿಲಿಗೆ ಫಳಫಳ ಹೊಳೆಯುತ್ತಾ ಸರಸಿಯ ಮುಖದ ಮೇಲೆ ಪ್ರಜ್ವಲಿಸುತ್ತಾ ಪ್ರಕಾಶಮಾನವಾಗಿ ಕಾಣುತ್ತಿತ್ತು.. ಅದು ರಾಯರ ಕಣ್ಣು ಕುಕ್ಕುತ್ತಿತ್ತು, ಮದುವೆಯಾದರೆ ಇವಳನ್ನೇ ಆಗಬೇಕು ಎಂದು ಮನಸ್ಸಿನಲ್ಲೇ ಮಂಡಿಗೆ ತಿನ್ನುತ್ತಿದ್ದ  ರಾಮರಾಯರನ್ನ ಅಮ್ಮ ಎಂಬ ಕೂಗು ಎಚ್ಚರಿಸಿತು...

 ಮುಂದುವರಿಯುದು...

ನಾಗಶ್ರೀ.ಎಸ್ ಭಂಡಾರಿ
 ಮೂಡುಬಿದಿರೆ

Comments

Post a Comment

Popular posts from this blog

ಹೆಮ್ಮೆಯ ಭಂಡಾರಿ ಪ್ರತಿಭೆ : 4 - ಸಂದೀಪ್ ಭಂಡಾರಿ

ಸದಾಶಿವ. ಸಂಚಿಕೆ - 2

ಸದಾಶಿವ - ಸಂಚಿಕೆ-32